ಕೋಲ್ಕತ್ತಾ: ಕೊರೊನಾ ಲಾಕ್‌ಡೌನ್ ಲಕ್ಷಾಂತರ ಜನರನ್ನು ಉದ್ಯೋಗ ರಹಿತರನ್ನಾಗಿ ಮಾಡಿದೆ. ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿಯೊಬ್ಬ ಓದು ಬಿಟ್ಟು ಬೀದಿ ವ್ಯಾಪಾರ ಶುರು ಮಾಡುವ ಪರಿಸ್ಥಿತಿ ಬಂದಿದೆ.
ಮುರ್ಶಿದಾಬಾದ್ ಶಂಷೇರ್‌ಗಂಜ್ ಚಾಚಂದ್ ಹೈಸ್ಕೂಲ್ 10 ನೇ ತರಗತಿ ವಿದ್ಯಾರ್ಥಿ ಜಿತು ಸಹಾ ಓದು ಬಿಟ್ಟು ಸೈಕಲ್ ನಲ್ಲಿ ಬೀದಿ ಬೀದಿ ತಿರುಗಿ ವ್ಯಾಪಾರ ನಡೆಸುತ್ತಿದ್ದಾನೆ.
ಕೇರಳ ಮೂಲದ ಆತನ ತಂದೆ ಕಲ್ಲು ಒಡೆಯುವ ಕಾರ್ಯ ಮಾಡುತ್ತಿದ್ದರು. ತಾಯಿ ಸ್ಥಳೀಯ ಫ್ಯಾಕ್ಟರಿಯಲ್ಲಿ ಬೀಡಿ ಕಟ್ಟಿ ಒಂದಿಷ್ಟು ಗಳಿಸುತ್ತಿದ್ದರು. ಆದರೆ, ಲಾಕ್‌ಡೌನ್ ನಿಂದ ಇಬ್ಬರೂ ಕೆಲಸ ಕಳೆದುಕೊಂಡಿದ್ದರು. ತಂದೆ ಉಸಿರಾಟದ ತೊಂದರೆಗೆ ಒಳಗಾದರು. ಇದರಿಂದ ಜೀವನ ನಿರ್ವಹಣೆಗಾಗಿ ಜೀತು ಕೆಲಸ ಆರಂಭಿಸುವುದು ಅನಿವಾರ್ಯವಾಯಿತು. ಆತ ಮನೆ ಮನೆಗೆ ಸೈಕಲ್ ನಲ್ಲಿ ತೆರಳಿ ಅಕ್ಕಿ, ಉಪ್ಪಿನಕಾಯಿ ಮಾರಲು ಶುರು ಮಾಡಿದ್ದು, ದಿನಕ್ಕೆ 200 ರಿಂದ 250 ರೂ. ಗಳಿಸಿದ ಬಾಲಕ ತಿಂಗಳ ಅಂತ್ಯಕ್ಕೆ 7 ಸಾವಿರ ರೂ.ಗಳನ್ನು ಉಳಿಸಿ ತಾಯಿಗೆ ನೀಡಿದ್ದಾನೆ.