ಮಿಸ್ ಇಂಡಿಯಾ 2016ರ ಫೈನಲಿಸ್ಟ್ ಐಶ್ವರ್ಯ ಶೆರೋನ್ ಯುಪಿಎಸ್ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್ ಗಳಿಸಿದ್ದಾರೆ.
2014 ರಲ್ಲಿ ನವದೆಹಲಿಯಲ್ಲಿ ನಡೆದ ಟೈಮ್ಸ್ ಫ್ರೆಶ್ ಫೇಸ್ ಎಂಬ ಸೌಂದರ್ಯ ಸ್ಪರ್ಧೆಯಿಂದ ಆಕೆಯ ಮಾಡೆಲಿಂಗ್ ವೃತ್ತಿ ಪ್ರಾರಂಭವಾಗಿತ್ತು. ಹಂತ ಹಂತವಾಗಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತಿನ 21 ಸ್ಪರ್ಧಾಳುಗಳಲ್ಲಿ ಒಬ್ಬಾಕೆಯಾದ ಐಶ್ವರ್ಯಾ ಇಂಡಸ್ಟ್ರಿಯಲ್ಲಿ ಹೆಜ್ಜೆ ಗುರುತು ಮೂಡಿಸಿದ್ದರು.
ಆದರೆ, ಯು.ಪಿ.ಎಸ್.ಸಿ. ತನ್ನ ಮುಖ್ಯ ಕನಸು ಎಂದು ಆಕೆ ಹೇಳಿಕೊಂಡಿದ್ದರು. ಮಾಡೆಲಿಂಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎರಡನ್ನೂ ನಿಭಾಯಿಸುವುದು ಆಕೆಗೆ ಸುಲಭದ ಕೆಲಸವಾಗಿರಲಿಲ್ಲ. “ನಾನು ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಸಾಮಾಜಿಕ ಜಾಲತಾಣಗಳಿಂದ ದೂರ ಇದ್ದು, ಪರೀಕ್ಷೆಗೆ ತಯಾರಿ ನಡೆಸಿದ್ದೆ” ಎಂದು ಐಶ್ವರ್ಯ ಹೇಳಿಕೊಂಡಿದ್ದಾರೆ. ಐಶ್ವರ್ಯ ತೆಲಂಗಾಣ ಎನ್.ಸಿ.ಸಿ. ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಕರ್ನಲ್ ಅಜಯ ಕುಮಾರ್ ಎಂಬುವವರ ಪುತ್ರಿಯಾಗಿದ್ದು, ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ.