ಉಪನಾಮ ಸರಿಯಿಲ್ಲ ಎಂದು ಕಾರಣ ನೀಡಿದ ರಾಷ್ಟ್ರೀಯ ಬೀಜ ನಿಗಮ ನಿಯಮಿತವು (NSCL) ಅಸ್ಸಾಂನ ಪ್ರಿಯಾಂಕಾ ಚುತಿಯಾ ಹೆಸರಿನ ಯುವತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪಡೆಯಲು ನಿರಾಕರಿಸಿದೆ. ಇಲ್ಲಿನ ಗೊಗಾಮುಖ್ ಪ್ರದೇಶದವರಾದ ಪ್ರಿಯಾಂಕಾ ಕೃಷಿ ಆರ್ಥಿಕತೆ ಹಾಗೂ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
NSCL ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಸರ್ ನೇಮ್ ಉಲ್ಲೇಖ ಮಾಡಬೇಕಾದ ಜಾಗದಲ್ಲಿ, ಚುತಿಯಾ ಎಂದು ಬರೆದಾಗ, ಸರಿಯಾದ ಸರ್ ನೇಮ್ ಉಲ್ಲೇಖಿಸಲು ಪೋರ್ಟಲ್ ಅವರನ್ನು ಕೇಳಿದ್ದಲ್ಲದೇ, ಮತ್ತೆ ಮತ್ತೆ ತಮ್ಮ ಸರ್ ನೇಮ್ ಮೂಲಕ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಪೂರ್ಣಗೊಳಿಸಲು ನೋಡಿದ ಪ್ರಿಯಾಂಕಾಗೆ ಈ ಪೋರ್ಟಲ್ ಅಡ್ಡಿಪಡಿಸಿದೆ.
ಇಂಗ್ಲಿಷ್ನಲ್ಲಿ ಚುತಿಯಾ ಎಂದು ಬರೆಯಲ್ಪಟ್ಟರೂ ಸುತಿಯಾ ಎಂದು ಉಚ್ಛರಿಸಲ್ಪಡುವ ಈ ಸಮುದಾಯವು ಅಸ್ಸಾಂನ ಮೂಲ ಸಮುದಾಯಗಳಲ್ಲಿ ಒಂದಾಗಿದೆ. ಈ ಸಮುದಾಯದ ಜನರು ಅಸ್ಸಾಂನ ಮೇಲ್ಭಾಗದ ಜಿಲ್ಲೆಗಳು ಹಾಗೂ ಕೆಳಭಾಗದ ಬರಾಖ್ ಕಣಿವೆಯಲ್ಲಿ ಕಾಣಸಿಗುತ್ತಾರೆ. ಈ ಸುತಿಯಾ ಸಮುದಾಯವು 1187 ರಿಂದ 1673ರ ವರೆಗೂ ಇಂದಿನ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಆಳ್ವಿಕೆ ನಡೆಸುತ್ತಿತ್ತು.