
ಅಮರಾವತಿ: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಭಾನುವಾರ ತನ್ನ ತಂದೆಗೆ ಚಿತ್ರಹಿಂಸೆ ನೀಡಿ ತನ್ನ ಪ್ರಿಯತಮೆಗೆ ವೀಕ್ಷಿಸಲು ಆನ್ ಲೈನ್ ನಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಚಿತ್ತೂರು II ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸೋಮವಾರ ತಡರಾತ್ರಿ ಬೆಳಕಿಗೆ ಬಂದಿದೆ. ಭರತ್ ಎಂದು ಗುರುತಿಸಲಾದ ಯುವಕ ತನಗಿಂತ ಹೆಚ್ಚು ವಯಸ್ಸಾದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. 39 ವರ್ಷದ ಮಹಿಳೆಯೊಂದಿಗೆ ಮಗನ ಸಂಬಂಧ ತಿಳಿದ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆತನ ತಂದೆ ದಿಲ್ಲಿ ಬಾಬು ನಡುವೆ ಹಲವು ಬಾರಿ ಜಗಳವಾಡಿದ್ದಾರೆ.
ಮಹಿಳೆಯೊಂದಿಗಿನ ಸಂಬಂಧವನ್ನು ಕಡಿತಗೊಳಿಸುವಂತೆ ಹಲವಾರು ಬಾರಿ ಪ್ರಯತ್ನ ಮಾಡಿದ್ದಾರೆ. ಆದರೂ ಭರತ್ ಮತ್ತು ಮಹಿಳೆ ಅಕ್ರಮ ಸಂಬಂಧ ಮುಂದುವರೆಸಿದ್ದರು, ಇದರಿಂದ ಕೋಪಗೊಂಡ ದಿಲ್ಲಿ ಬಾಬು ಚಿತ್ತೂರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಭರತ್ ಗೆ ಬುದ್ಧಿವಾದ ಹೇಳಿ ವರ್ತನೆ ಬದಲಾಯಿಸಿಕೊಳ್ಳಲು ತಿಳಿಸಿದ್ದಾರೆ.
ಇದರಿಂದ ತಂದೆ ಮೇಲೆ ಕೋಪಗೊಂಡ ಭರತ್ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ತಂದೆಗೆ ಥಳಿಸಿದ್ದನ್ನು ತೋರಿಸಲು ಮಹಿಳೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ಥಳಿತಕ್ಕೊಳಗಾದ ದಿಲ್ಲಿ ಬಾಬು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.