ಕೊಲ್ಕತ್ತಾ: ಲಾಕ್ ಡೌನ್ ಜಾರಿಯಾಗಿದ್ದರಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ದಂಪತಿ ತಮ್ಮ ಎರಡು ತಿಂಗಳ ಮಗುವನ್ನು ದೂರದ ಸಂಬಂಧಿಕರಿಗೆ ಮಾರಾಟ ಮಾಡಿದ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ್ ಜಿಲ್ಲೆಯಲ್ಲಿ ನಡೆದಿದೆ.
ಬಾಪು ಧಾರಾ ಮತ್ತು ತಾಪ್ಸಿ ದಂಪತಿ ಮಗು ಮಾರಾಟ ಮಾಡಿದವರು. ಕೊರೊನಾ ಸೋಂಕು ತಡೆಯಲು ಎರಡು ತಿಂಗಳಿಗೂ ಅಧಿಕ ಕಾಲ ಲಾಕ್ ಡೌನ್ ಜಾರಿ ಮಾಡಿದ್ದರಿಂದ ಕೆಲಸವಿಲ್ಲದ ದಂಪತಿಗೆ ಸಂಕಷ್ಟ ಎದುರಾಗಿದೆ. ಬಾಪು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು ತಾಪ್ಸಿ ಮನೆ ಕೆಲಸ ಮಾಡುತ್ತಿದ್ದಳು. ತೀವ್ರ ಸಂಕಷ್ಟದಲ್ಲಿದ್ದ ದಂಪತಿ ದೂರದ ಸಂಬಂಧಿಕರಿಗೆ ತಮ್ಮ ಎರಡು ತಿಂಗಳ ಮಗುವನ್ನು ಮೂರು ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಹೌರಾದಲ್ಲಿರುವ ಸಂಬಂಧಿಕರ ಮನೆಯಿಂದ ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಪು ಮತ್ತು ತಾಪ್ಸಿ ದಂಪತಿ ಲಾಕ್ಡೌನ್ ಕಾರಣ ನಿರುದ್ಯೋಗಿಗಳಾಗಿದ್ದು, ದಂಪತಿ ಊಟ ಮಾಡಲು ಕೂಡ ಕಷ್ಟದ ಸ್ಥಿತಿಯಲ್ಲಿದ್ದರು. ಇಂತಹ ಸಂದರ್ಭದಲ್ಲಿ ಮಗುವಿಗೆ ಹಾಲುಣಿಸಲು ಸಾಧ್ಯವಾಗದೆ ಮಗುವನ್ನು ಮಾರಾಟ ಮಾಡಲಾಗಿದೆ. ಹಸಿವಿನಿಂದ ಅಳುತ್ತಿದ್ದ ಮಗು ಕಾಣದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.