ರಾಯಪುರ: ತಡರಾತ್ರಿ ಪ್ರಿಯಕರನೊಂದಿಗೆ ಸರಸವಾಡುತ್ತಿರುವುದನ್ನು ನೋಡಿದ ತಂಗಿಯನ್ನು ಗೆಳೆಯನೊಂದಿಗೆ ಸೇರಿ ಹದಿಹರೆಯದ ಹುಡುಗಿ ಕೊಲೆ ಮಾಡಿದ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಛತ್ತೀಸ್ಗಡದ ಕೊರ್ಬಾದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು 11 ವರ್ಷದ ಬಾಲಕಿಯನ್ನು 16 ವರ್ಷದ ಆಕೆಯ ಅಕ್ಕ ಮತ್ತು ಪ್ರಿಯಕರ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಮೊಬೈಲ್ ಫೋನ್ ಕೊಡಲು ತಂಗಿ ಜಗಳವಾಡಿದ್ದರಿಂದ ತಾನೇ ಕೊಲೆ ಮಾಡಿರುವುದಾಗಿ ಆರಂಭದಲ್ಲಿ ಅಕ್ಕ ತಿಳಿಸಿದ್ದಾಳೆ. ಆದರೆ ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ಕೊಲೆ ರಹಸ್ಯ ಗೊತ್ತಾಗಿದೆ.
11 ವರ್ಷ ಮತ್ತು 16 ವರ್ಷದ ಹೆಣ್ಣು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಪೋಷಕರು ಪಕ್ಕದ ಹಳ್ಳಿಯ ಉತ್ಸವದಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ. ಶುಕ್ರವಾರ ರಾತ್ರಿ 11 ವರ್ಷದ ಬಾಲಕಿಗೆ ನಿದ್ದೆಯಿಂದ ಎಚ್ಚರವಾಗಿದ್ದು ಈ ವೇಳೆ ತನ್ನ ಗೆಳೆಯನೊಂದಿಗೆ ಅಕ್ಕ ಸರಸವಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ವಿಷಯ ಬಯಲಾಗುವ ಭಯದಲ್ಲಿ ಆಕೆಯನ್ನು ಅಕ್ಕ ಮತ್ತು ಪ್ರಿಯಕರ ಕೊಲೆ ಮಾಡಿದ್ದಾರೆ.
ಶನಿವಾರ ಪೋಷಕರು ಹಿಂತಿರುಗಿದ ಸಂದರ್ಭದಲ್ಲಿ ಅಕ್ಕ ದಾರಿತಪ್ಪಿಸಲು ಮೊಬೈಲ್ ಕೊಡದ ಕಾರಣಕ್ಕೆ ತಂಗಿಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾಳೆ. ಆಕೆ ಹೇಳಿಕೆ ಬದಲಿಸುತ್ತಿದ್ದ ಕಾರಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮನೆಯ ಹೊರಗೆ ಬೈಕ್ ಚಕ್ರದ ಗುರುತುಗಳು ಕಂಡುಬಂದಿವೆ. ಆಕೆಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಕರೆಯ ವಿವರಗಳನ್ನು ಅಳಿಸಿರುವುದು ಗೊತ್ತಾಗಿದೆ. ಒಂದು ಸಂಖ್ಯೆಗೆ ಕರೆ ಮಾಡಿರುವುದು ಸೈಬರ್ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದ್ದು ತಪಾಸಣೆ ನಡೆಸಿದಾಗ ಘಟನೆ ನಡೆದ ಸಮಯದಲ್ಲಿ ಬಾಲಕಿಯ ಮನೆಯ ವ್ಯಾಪ್ತಿಯಲ್ಲಿ ಇರುವುದು ಗೊತ್ತಾಗಿದೆ.
ವಿನಯ್ ಜಗತ್ ಹೆಸರಿನಲ್ಲಿ ಫೋನ್ ನಂಬರ್ ನೋಂದಾಯಿಸಲಾಗಿದೆ. ಫೋನ್ ಸಂಖ್ಯೆಯನ್ನು ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಇಬ್ಬರು ಆರೋಪಿಗಳನ್ನು ಪೋಕ್ಸೋ ಕಾಯ್ದೆ, ಬಾಲಾಪರಾಧಿ ನ್ಯಾಯ ಕಾಯ್ದೆ ಮತ್ತು ಐಪಿಸಿ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.