ಒಂದೂವರೆ ವರ್ಷದ ಕಂದಮ್ಮನ್ನ ಸಿಗರೇಟ್ನಿಂದ ಸುಟ್ಟ ಹಾಗೂ ತಾಯಿಯನ್ನ ಥಳಿಸಿದ ಆರೋಪದ ಹಿನ್ನೆಲೆ ಪೊಲೀಸ್ ಪೇದೆಯನ್ನ ಬಂಧಿಸಿದ ಘಟನೆ ಚತ್ತೀಸಘಢದ ಬಲೋಡ್ ಜಿಲ್ಲೆಯಲ್ಲಿ ನಡೆದಿದೆ .
ಗುರುವಾರ ರಾತ್ರಿ ಅಪರಾಧ ಎಸಗಿ ಪರಾರಿಯಾಗಿದ್ದ ಕಾನ್ಸ್ಟೇಬಲ್ ಅವಿನಾಶ್ ರೈನನ್ನ ದುರ್ಗ್ ಜಿಲ್ಲೆಯ ಭಿಲಾಯ್ ಪಟ್ಟಣದಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ ಅಂತಾ ಬಲೋಡ್ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಸಿಂಗ್ ಮೀನಾ ತಿಳಿಸಿದ್ದಾರೆ.
ಬಲೋಡ್ ಜಿಲ್ಲೆಯಲ್ಲಿ ಆರೋಪಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಿವ್ನಿ ಪ್ರದೇಶದಲ್ಲಿದ್ದ ಸಂತ್ತಸ್ತರ ಮನೆಯಲ್ಲಿ ವಾಸವಾಗಿದ್ದ. ಒಂದು ತಿಂಗಳ ಹಿಂದೆಯಷ್ಟೇ ಪೇದೆಯನ್ನ ದುರ್ಗ್ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು.
ಮಹಿಳೆಗೆ ಸ್ವಲ್ಪ ಹಣವನ್ನ ಸಾಲದ ರೂಪದಲ್ಲಿ ನೀಡಿದ್ದ ಆರೋಪಿ ಆ ಹಣವನ್ನ ವಾಪಸ್ ಪಡೆಯುವ ಸಲುವಾಗಿ ಅಕ್ಟೋಬರ್ 24ರಂದು ಮಹಿಳೆ ಇದ್ದ ಸ್ಥಳಕ್ಕೆ ಬಂದಿದ್ದಾನೆ. ಈ ವೇಳೆ ಆಟವಾಡುತ್ತಿದ್ದ ಮಗು ಬಳಿ ತನಗೆ ಅಪ್ಪ ಎಂದು ಕರಿ ಅಂತಾ ಒತ್ತಾಯಿಸಿದ್ದಾನೆ. ಆದರೆ ಇದಕ್ಕೆ ಮಗು ಪ್ರತಿಕ್ರಯಿಸದೇ ಇದ್ದಾಗ ಆಕೆಯ ಮುಖ, ಹೊಟ್ಟೆ ಹಾಗೂ ಕೈಗಳಿಗೆ ಸಿಗರೇಟ್ ತುಂಡುಗಳಿಂದ ಸುಟ್ಟು ಗಾಯ ಮಾಡಿದ್ದಾನೆ. ಹಾಗೂ ಮಹಿಳೆಯನ್ನ ಥಳಿಸಿದ್ದಾನೆ. ಮಹಿಳೆಯ ಪತಿ ನಾಗ್ಪುರದಲ್ಲಿ ವಾಸವಾಗಿದ್ದಾರೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.