ಚೆನ್ನೈನ ರಾಜೀವ್ ಗಾಂಧಿ ಸಲೈನಲ್ಲಿರುವ ಐಟಿ ಕಂಪನಿಯಲ್ಲಿ ಬರೋಬ್ಬರಿ 40 ಉದ್ಯೋಗಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮೊದಲು ಈ ಕಂಪನಿಯಲ್ಲಿ ನಾಲ್ವರು ಉದ್ಯೋಗಿಗಳು ಸೋಂಕಿಗೆ ಒಳಗಾಗಿದ್ದರು. ಇದೀಗ ಈ ಗುಚ್ಛ ಬೆಳೆದು 40 ಸಿಬ್ಬಂದಿಗೆ ಸೋಂಕು ತಗುಲಿದೆ. ಅಧಿಕಾರಿಗಳು ಕಚೇರಿಯನ್ನ ಬಂದ್ ಮಾಡಿ ಇಲ್ಲವೇ ಕಡಿಮೆ ಸಿಬ್ಬಂದಿ ಜೊತೆಗೆ ಕೆಲಸ ಮಾಡಿ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಕೆಲ ದಿನಗಳ ಹಿಂದಷ್ಟೇ ಥುರೈಪಕ್ಕಂ ನಿವಾಸಿಯೊಬ್ಬರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಈ ಸೋಂಕು ಐಟಿ ಕಂಪನಿವರೆಗೂ ತಾಕಿದೆ ಎನ್ನಲಾಗಿದೆ. ಮೊದಲು ಐಟಿ ಕಂಪನಿಯ ನಾಲ್ವರು ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದರು ಇದಾದ ಬಳಿಕ ಈ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
364 ಮಂದಿ ಸಂಪರ್ಕಿತರನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ ನಲವತ್ತು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿತ ಉದ್ಯೋಗಿಗಳು ಪೆರುಂಗುಡಿ, ತೆರಮಣಿ ಹಾಗೂ ಕಂಡಂಚವಡಿ ಶಾಖೆಗೆ ಸೇರಿದವರಾಗಿದ್ದಾರೆ.
ಈ ನಡುವೆ ಸೋಂಕಿನ ಹರಡುವಿಕೆಯನ್ನ ಕಡಿಮೆ ಮಾಡುವ ಸಲುವಾಗಿ 7 ಐಟಿ ಕಂಪನಿಗಳನ್ನ ಮುಚ್ಚಲಾಗಿದೆ. ಹಾಗೂ ಈ ಪ್ರದೇಶದಲ್ಲಿ ಕೊರೊನಾ ಪರೀಕ್ಷೆಯನ್ನ ಹೆಚ್ಚಿಸಲಾಗಿದೆ. ಈ ಕಟ್ಟಡದಲ್ಲಿ ಒಟ್ಟು 16 ಐಟಿ ಕಂಪನಿಗಳು ಕಾರ್ಯ ನಿರ್ವಹಿಸ್ತಾ ಇದ್ದು ಇದರಲ್ಲಿ 7 ಕಂಪನಿ ಸಿಬ್ಬಂದಿಗೆ ಕಚೇರಿಗೆ ಕೆಲಸಕ್ಕೆ ಬರಲು ಅನುಮತಿ ನೀಡಲಾಗಿತ್ತು.