ಖಾಸಗಿ ಶಾಲೆಯ ಆನ್‌ಲೈನ್ ಕ್ಲಾಸ್ ಅಡೆಂಟ್ ಮಾಡುವ ಸಲುವಾಗಿ 13 ವರ್ಷದ ಬಾಲಕ ಮೊಬೈಲ್ ಕಳ್ಳತನ ಮಾಡಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಪೊಲೀಸರ ತನಿಖೆ ವೇಳೆ ಬಾಲಕನ ಕರುಣಾಜನಕ ಕಥೆ ಬಹಿರಂಗವಾಗಿದ್ದು, ಪೊಲೀಸರು ಆತನಿಗಾಗಿ ಹೊಸ ಫೋನ್ ಕೊಡಿಸಿ ಕಳಿಸಿದ್ದಾರೆ.
ಬಾಲಕ ತೆರಳುತ್ತಿದ್ದ ಕಾರ್ಪೊರೇಟ್ ಶಾಲೆಯಲ್ಲಾಗಲೇ ಆನ್‌ಲೈನ್ ಕ್ಲಾಸ್ ಪ್ರಾರಂಭವಾಗಿ ಬಹಳ ದಿನ ಕಳೆದಿತ್ತು. ಬಾಲಕನ ಅಮ್ಮ ಮನೆಗೆಲಸ ಮಾಡಿಕೊಂಡು ಜೀವನ ನಡೆಸುವವರಾಗಿದ್ದು, ಅವರ ಬಳಿ ಮೊಬೈಲ್ ಫೋನ್ ಕೊಳ್ಳಲು ಹಣವಿರಲಿಲ್ಲ. ಇದರಿಂದ ಬಾಲಕ ಶಾಲೆಯ ಅವಧಿಯಲ್ಲಿ ಬೇಸರದಿಂದ ಕುಳಿತಿರುವುದನ್ನು ಕಂಡ ಇಬ್ಬರು ಕಳ್ಳರು ಆತನನ್ನು ಲೂಟಿಗೆ ಬಳಸಿಕೊಳ್ಳಲು ನಿರ್ಧರಿಸಿದರು. ಕಳ್ಳತನದಲ್ಲಿ ಭಾಗವಹಿಸಿದರೆ ನಿನಗೆ ಮೊಬೈಲ್ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ತಿರುವೊಟ್ಟಿಯೂರ್ ಬಳಿ ಲಾರಿ ಚಾಲಕನ ಮೊಬೈಲ್ ಕಳ್ಳತನ ಮಾಡಿಕೊಂಡು ಬಂದಿದ್ದರು.
ತಿರುವೊಟ್ಟಿಯೂರ್ ಅಪರಾಧ ವಿಭಾಗದ ಪೊಲೀಸರ ಕೈಗೆ ಮೂವರೂ ಸಿಕ್ಕಿ ಬಿದ್ದಿದ್ದರು. ವಿಚಾರಣೆ ವೇಳೆ ಬಾಲಕನ ಕಥೆ ಕೇಳಿ ಇನ್ಸ್‌ಪೆಕ್ಟರ್ ಎಸ್. ಭುವನೇಶ್ವರಿ ಮರುಗಿದ್ದಾರೆ. ತಮ್ಮ ಮಗಳಿಗಾಗಿ ಮೊಬೈಲ್ ಕೊಳ್ಳಲು ಸಂಗ್ರಹಿಸಿಟ್ಟ ಹಣದಲ್ಲಿ ಬಾಲಕನಿಗೆ ಒಂದು ಮೊಬೈಲ್ ಕೊಡಿಸಿ, ಬುದ್ಧಿವಾದ ಹೇಳಿದ್ದಾರೆ. ನನ್ನ ಈ ಕಾರ್ಯದಿಂದ ಆತನ ಜೀವನದಲ್ಲಿ ಬದಲಾವಣೆಯಾದರೆ ಅದೇ ನನಗೆ ಸಮಾಧಾನ ಎಂದಿದ್ದಾರೆ.