ಪೊಲೀಸರು ರಚಿಸಿದ ಜಾಲದಿಂದ ತಪ್ಪಿಸಿಕೊಂಡು ಕಿಡ್ನಾಪರ್ಗಳು 30 ಲಕ್ಷದೊಂದಿಗೆ ಪರಾರಿಯಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಸುಮಾರು 2 ಕಿಮೀ ಚೇಸಿಂಗ್ ಬಳಿಕವೂ ಖದೀಮರು ಹೇಗೆ ಪರಾರಿಯಾದರು ಎಂದು ಕಾನ್ಪುರ ದಕ್ಷಿಣ ಎಸ್ಪಿ ಅಪರ್ಣಾ ಗುಪ್ತಾ ವಿವರಣೆ ನೀಡುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಲ್ಯಾಬ್ ಟೆಕ್ನೀಶಿಯನ್ ಒಬ್ಬರನ್ನು ಅಪಹರಣ ಮಾಡಲಾಗಿತ್ತು. ಅಪಹರಣಕಾರರನ್ನು ಹಿಡಿಯಲು ಪೊಲೀಸರು ಜಾಲ ಬೀಸಿದ್ದರು. ಆ ಕಾರ್ಯಾಚರಣೆಯ ಯಶಸ್ವಿಯಾಗಲು ಅಪಹರಣಕ್ಕೊಳಗಾದ ಲ್ಯಾಬ್ ಟೆಕ್ನೀಶಿಯನ್ ಕುಟುಂಬಸ್ಥರು, ಮನೆ ಹಾಗೂ ಬಂಗಾರ ಮಾರಿ 30 ಲಕ್ಷ ರೂ. ಒಟ್ಟುಗೂಡಿಸಿ ಪೊಲೀಸರಿಗೆ ನೀಡಿದ್ದರು. ಆದರೆ, ಹಣ ಪಡೆದ ಅಪಹರಣಕಾರರು ಟೆಕ್ನೀಶಿಯನ್ ನನ್ನು ಒಪ್ಪಿಸದೇ ಹಣದೊಂದಿಗೆ ಪರಾರಿಯಾಗಿದ್ದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹಣ ಹಸ್ತಾಂತರಕ್ಕೆ ಜಾಗ ಗುರುತಿಸಲಾಗಿತ್ತು. ಹಣ ಪಡೆದ ಕಿಡ್ನಾಪರ್ಗಳ ಹಿಂದೆ ಸುಮಾರು 2 ಕಿಮೀ ಓಡಿದ ನಂತರವೂ ಸಿಕ್ಕಿಲ್ಲ. ಹಣದ ಚೀಲವನ್ನು ಬಿಟ್ಟು ಓಡಿದ್ದನ್ನು ನೋಡಿದ್ದೇವೆ. ಆದರೆ, ಸಾಕಷ್ಟು ಹುಡುಕಿದ ಬಳಿಕವೂ ಚೀಲ ಮಾತ್ರ ಸಿಕ್ಕಿಲ್ಲ. ಕಳ್ಳರು ಎಸೆದು ಹೋದ ಹಣದ ಚೀಲವನ್ನು ಬೇರೆ ಯಾರೋ ಎತ್ತಿಕೊಂಡು ಹೋಗಿರಬೇಕು ಎಂದು ಪೊಲೀಸರು ವಿವರಣೆ ನೀಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಹಿಳಾ ಎಸ್ಪಿ ಹೇಳಿದ ವಿವರಣೆ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 30 ಸಾವಿರಕ್ಕೂ ಅಧಿಕ ಜನರು ವಿಡಿಯೋ ವೀಕ್ಷಿಸಿದ್ದಾರೆ.