ನವದೆಹಲಿ: ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್-V ಮೂರನೇ ಹಂತದ ಪ್ರಯೋಗ ಭಾರತದಲ್ಲಿ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ನೀತಿ ಆಯೋಗದ ಸದಸ್ಯ ಮತ್ತು ಕೋವಿಡ್-19 ಲಸಿಕೆಯ ರಾಷ್ಟ್ರೀಯ ತಜ್ಞರ ತಂಡದ ಮುಖ್ಯಸ್ಥ ಡಾ.ವಿ.ಕೆ. ಪೌಲ್ ಈ ಕುರಿತಾಗಿ ಮಾಹಿತಿ ನೀಡಿದ್ದು, ರಷ್ಯಾ ತಯಾರಿಸಿದ ಕೋವಿಡ್-19 ಲಸಿಕೆ ಸ್ಪುಟ್ನಿಕ್-V ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಭಾರತದಲ್ಲಿ ನಡೆಸಲು ಅವಕಾಶ ನೀಡಬೇಕೆಂದು ರಷ್ಯಾ ಸರ್ಕಾರ ಮಾಡಿದ ಮನವಿಯನ್ನು ಭಾರತ ಸರ್ಕಾರ ಪರಿಗಣಿಸುತ್ತದೆ ಎಂದು ತಿಳಿಸಿದ್ದಾರೆ.
ರಷ್ಯಾ ಜೊತೆಗೆ ವಿಶೇಷ ಸ್ನೇಹಿತ, ಪಾಲುದಾರಿಕೆಯ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಪರಿಗಣಿಸಿದ್ದು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಮಾಸ್ಕೋದ ಗಮಾಲೆ ಇನ್ ಸ್ಟಿಟ್ಯೂಟ್ ಮತ್ತು ರಷ್ಯಾ ರಕ್ಷಣಾ ಸಚಿವಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್ -19 ಸ್ಪುಟ್ನಿಕ್-V ಪರೀಕ್ಷೆಗಳ ಹಂತ ಮುಗಿದು ನಾಗರಿಕರಿಗಾಗಿ ಲಸಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ಒಂದು ಮತ್ತು ಎರಡನೇ ಹಂತದ ಪ್ರಯೋಗದಲ್ಲಿ ಲಸಿಕೆ ಪಡೆದ ಸ್ವಯಂಸೇವಕರ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ.
ಇನ್ನು ಭಾರತದಲ್ಲಿ ಕೋವ್ಯಾಕ್ಸಿನ್, ಝೈಡಸ್ ಕ್ಯಾಡಿಲಾ, ಕೋವಿಶೀಲ್ಡ್ ಲಸಿಕೆಗಳ ಪ್ರಯೋಗದ ಅಂತಿಮ ಹಂತದಲ್ಲಿದ್ದು, ಇವೆಲ್ಲವೂ ವರ್ಷಾಂತ್ಯದ ವೇಳೆಗೆ ದೇಶದ ಜನರಿಗೆ ಲಭ್ಯವಾಗಲಿವೆ ಎಂದು ಹೇಳಲಾಗಿದೆ.