ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಪ್ರತಿ ವರ್ಷ ಸಲ್ಲಿಸಬೇಕಾದ ಲೈಫ್ ಸರ್ಟಿಫಿಕೆಟ್ ಗಡುವಿನಲ್ಲಿ ಬದಲಾವಣೆ ಮಾಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ, ಕೇಂದ್ರ ಸರ್ಕಾರದ ಎಲ್ಲಾ ಪಿಂಚಣಿದಾರರು ಈಗ ನವೆಂಬರ್ 1 ಮತ್ತು ಡಿಸೆಂಬರ್ 31 ರ ನಡುವೆ ತಮ್ಮ ಜೀವ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಪಿಟಿಐ ಸುದ್ದಿಯ ಪ್ರಕಾರ, ಇದಕ್ಕೂ ಮುನ್ನ ಪಿಂಚಣಿ ಮುಂದುವರಿಸಲು ಜೀವ ಪ್ರಮಾಣ ಪತ್ರವನ್ನು ನವೆಂಬರ್ ತಿಂಗಳಲ್ಲಿ ಮಾತ್ರ ಸಲ್ಲಿಸಬಹುದು ಎಂಬ ನಿಯಮವಿತ್ತು. ಸಾಂಕ್ರಾಮಿಕ ರೋಗ ಮತ್ತು ವೃದ್ಧರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮಕೈಗೊಂಡಿದೆ.
ಎಲ್ಲಾ ಕೇಂದ್ರ ಸರ್ಕಾರದ ಪಿಂಚಣಿದಾರರು ನವೆಂಬರ್ 1 ರಿಂದ ಡಿಸೆಂಬರ್ 31 ರವರೆಗೆ ಜೀವ ಪ್ರಮಾಣ ಪತ್ರವನ್ನು ಸಲ್ಲಿಸಬಹುದು ಎಂದು ಸಚಿವರು ಹೇಳಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿದಾರರು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಜೀವ ಪ್ರಮಾಣಪತ್ರಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ನಿಯಮದ ಪ್ರಕಾರ, ಪಿಂಚಣಿದಾರರು ಸಮಯಕ್ಕೆ ಜೀವ ಪ್ರಮಾಣಪತ್ರವನ್ನು ಬ್ಯಾಂಕಿಗೆ ಸಲ್ಲಿಸದಿದ್ದರೆ, ಅವರ ಪಿಂಚಣಿಯನ್ನು ನಿಲ್ಲಿಸಬಹುದು. ಆನ್‌ಲೈನ್ ಮೂಲಕ ಲೈಫ್ ಸರ್ಟಿಫಿಕೇಟ್ ಸಲ್ಲಿಸುವ ಸೌಲಭ್ಯವನ್ನು ಸರ್ಕಾರ ಈಗ ನೀಡಿದೆ. ಲ್ಯಾಪ್‌ಟಾಪ್ ಅಥವಾ ಮೊಬೈಲ್‌ನಿಂದ https://jeevanpramaan.gov.in ಮೂಲಕ ಮತ್ತು ಉಮಾಂಗ್ ಆ್ಯಪ್ ಮೂಲಕ ಯಾವುದೇ ಶಾಖೆಯಲ್ಲಿ ಡಿಜಿಟಲ್ ರೂಪದಲ್ಲಿ ಸಲ್ಲಿಸಬಹುದು.