ಇನ್ನೂ ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ಲವೆಂದ್ರೆ ಈಗ್ಲೇ ಹಾಕಿಸಿಕೊಳ್ಳಿ. ಕೊರೊನಾ ಲಸಿಕೆಯಿಂದ ಎರಡು ಲಾಭವಿದೆ. ಒಂದು ಕೊರೊನಾದಿಂದ ರಕ್ಷಣೆಯಾದ್ರೆ ಇನ್ನೊಂದು ಹೆಚ್ಚಿನ ಬಡ್ಡಿ. ಲಸಿಕೆ ಪಡೆಯಲು ನಾಗರಿಕರನ್ನು ಉತ್ತೇಜಿಸಲು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಒಂದು ಯೋಜನೆ ಘೋಷಣೆ ಮಾಡಿದೆ. ಟ್ವೀಟರ್ ಮೂಲಕ ಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡಿದೆ.
ಲಸಿಕೆ ಹಾಕಿಸಿಕೊಂಡ ಗ್ರಾಹಕರಿಗೆ ಬ್ಯಾಂಕ್ ಆಕರ್ಷಕ ಕೊಡುಗೆ ನೀಡ್ತಿದೆ. ಲಸಿಕೆ ಹಾಕಿಸಿಕೊಂಡ ಗ್ರಾಹಕರ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ನೀಡುವುದಾಗಿ ಬ್ಯಾಂಕ್ ಹೇಳಿದೆ. ಕೊರೊನಾ ವೈರಸ್ ಲಸಿಕೆ ಪಡೆಯುವವರಿಗೆ 25 ಬಿಪಿಎಸ್ ಅಥವಾ ಸ್ಥಿರ ಠೇವಣಿ ಮೇಲೆ ಶೇಕಡಾ 0.25ರಷ್ಟು ಹೆಚ್ಚಿನ ಬಡ್ಡಿ ಸಿಗಲಿದೆ.
ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಲಸಿಕೆ ಪಡೆಯಲು ಜನರನ್ನು ಉತ್ತೇಜಿಸಲು ವಿಶೇಷ ಠೇವಣಿ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಈ ಯೋಜನೆಯಡಿ ಕೋವಿಡ್ -19 ಲಸಿಕೆ ಪಡೆದ ಜನರಿಗೆ ಬ್ಯಾಂಕ್ ಮಾನ್ಯ ಕಾರ್ಡ್ ದರದ ಮೇಲೆ ಶೇಕಡಾ 0.25 ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ.
ಬ್ಯಾಂಕ್ ಈ ಯೋಜನೆಗೆ ಇಮ್ಯೂನ್ ಇಂಡಿಯಾ ಠೇವಣಿ ಯೋಜನೆ ಎಂದು ಹೆಸರಿಟ್ಟಿದೆ. ಇದರ ಮುಕ್ತಾಯ ಅವಧಿ 1,111 ದಿನಗಳು. ಈ ಯೋಜನೆಯಡಿ ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಸಾಮಾನ್ಯ ಬಡ್ಡಿಗಿಂತ 25 ಬಿಪಿಎಸ್ ಹೆಚ್ಚಿನ ಬಡ್ಡಿ ಸಿಗಲಿದೆ. ಲಸಿಕೆಯ ಒಂದು ಡೋಸ್ ಪಡೆದವರು ಕೂಡ ಇದ್ರ ಲಾಭ ಪಡೆಯಲಿದ್ದಾರೆ.