ಕೊರೊನಾ ಪ್ರಕರಣ ಗಣನೀಯವಾಗಿ ಏರಿಕೆ ಕಾಣುತ್ತಿರುವ ಹಿನ್ನೆಲೆ ಸಿಬಿಎಸ್ಇ 10 ಹಾಗೂ 12ನೇ ತರಗತಿ ಪರೀಕ್ಷೆಯನ್ನ ರದ್ದು ಮಾಡುವಂತೆ ಬೇಡಿಕೆಗಳು ಕೇಳಿಬರ್ತಿದೆ. ಪರೀಕ್ಷೆಯನ್ನ ರದ್ದು ಮಾಡುವಂತೆ ಕೋರಿ ಸೆಂಟ್ರಲ್ ಬೋರ್ಡ್ ಆಫ್ ಎಜ್ಯುಕೇಶನ್ಗೆ ಆನ್ಲೈನ್ ಪಿಟೀಷನ್ ಸಲ್ಲಿಸಲಾಗ್ತಿದೆ.
11ನೇ ತರಗತಿ ಪರೀಕ್ಷೆಯನ್ನ ರದ್ದು ಮಾಡಲಾಗಿದೆ. ಹಾಗಿದ್ದ ಮೇಲೆ 10ನೇ ತರಗತಿ ಪರೀಕ್ಷೆಯನ್ನ ಯಾಕೆ ರದ್ದು ಮಾಡಬಾರದು..? 10 ಹಾಗೂ 12ನೇ ತರಗತಿ ಪರೀಕ್ಷೆ ಮಾತ್ರ ಏಕೆ ಮುಖ್ಯ..?ಎಂದು ಟ್ವಿಟರ್ನಲ್ಲಿ ವಿಕಾಸ್ ಯಾದವ್ ಪ್ರಶ್ನೆ ಮಾಡಿದ್ದಾರೆ.
ಈ ನಡುವೆ ಪರೀಕ್ಷೆಗಳನ್ನ ರದ್ದುಗೊಳಿಸುವ ಬಗ್ಗೆ ಸಿಬಿಎಸ್ಇ ಬೋರ್ಡ್ ತನ್ನ ನಿಲುವನ್ನ ಸ್ಪಷ್ಟಪಡಿಸಿದೆ. ಎಲ್ಲಾ ಸುರಕ್ಷತಾ ಕ್ರಮಗಳನ್ನ ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನ ನಡೆಸಲಾಗುತ್ತೆ ಎಂದು ಬೋರ್ಡ್ ಹೇಳಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಕೊರೊನಾದ ಎಲ್ಲಾ ಮಾರ್ಗಸೂಚಿಗಳನ್ನ ಪಾಲಿಸುತ್ತಿದ್ದೇವೆ. ಸಾಮಾಜಿಕ ಅಂತರವನ್ನ ಕಾಪಾಡುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನ ಹೆಚ್ಚಿಸಿದ್ದೇವೆ ಎಂದು ಬೋರ್ಡ್ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಿಬಿಎಸ್ಇ ಬೋರ್ಡ್ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮವನ್ನ ಕೈಗೊಳ್ಳುವ ಬಗ್ಗೆ ಭರವಸೆಯನ್ನೇನೋ ನೀಡಿದೆ. ಆದರೆ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣ ಮಾಡುವ ವೇಳೆಯಲ್ಲಿ ವಿದ್ಯಾರ್ಥಿಗೆ ಕೊರೊನಾ ಬರಬಾರದು ಎಂದೇನಿಲ್ಲ ಅಲ್ವೇ..? ಇದರಿಂದ ಕೊರೊನಾ ಬರಬಹುದು ಅಲ್ವಾ..? ನಮಗೆ ಪರೀಕ್ಷೆ ಬೇಡ. ಜೀವನ ಮುಖ್ಯ ಎಂದು ಅರ್ಪಣ್ ಸರ್ಕಾರ್ ಟ್ವೀಟಾಯಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉತ್ತರದ ಪ್ರದೇಶದ ಮಾಧ್ಯಮಿಕ ಶಿಕ್ಷಣ ಪರಿಷತ್ 10, 12ರ ಬೋರ್ಡ್ ಎಕ್ಸಾಂನ್ನು ಮುಂದೂಡಿತ್ತು. ಏಪ್ರಿಲ್ 24ರಂದು ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನ ಕೊರೊನಾದ ಕಾರಣವನ್ನೊಡ್ಡಿ ಮುಂದೂಡಲಾಗಿದೆ.