ನವದೆಹಲಿ: ಲಖ್ನೋ ಸಿಬಿಐ ವಿಶೇಷ ನ್ಯಾಯಾಲಯ ಇಂದು ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಲಿದೆ.
28 ವರ್ಷಗಳ ಸುದೀರ್ಘ ಅವಧಿಯ ನಂತರ ಇವತ್ತು ತೀರ್ಪು ಪ್ರಕಟವಾಗಲಿದ್ದು ಪ್ರಕರಣದಲ್ಲಿ ಆರೋಪಿತರಾದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ ಜೋಶಿ, ಉಮಾಭಾರತಿ ಮತ್ತು ಸೇರಿದಂತೆ 32 ಮಂದಿ ಕುರಿತಾದ ತೀರ್ಪು ಹೊರಬೀಳಲಿದೆ.
ಈ ಪ್ರಕರಣದಲ್ಲಿ 49 ಮಂದಿ ಆರೋಪಿತರಿದ್ದು, ವಿಚಾರಣೆ ಹಂತದಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ತೀರ್ಪು ಪ್ರಕಟಣೆಯ ದಿನವಾದ ಇಂದು ಖುದ್ದಾಗಿ ಹಾಜರಿರುವಂತೆ ಎಲ್ಲಾ ಆರೋಪಿಗಳಿಗೆ ಕೋರ್ಟ್ ಸೂಚನೆ ನೀಡಿದ್ದರೂ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಸೇರಿದಂತೆ ಕೆಲವರು ಅನಾರೋಗ್ಯದ ಕಾರಣ ಗೈರು ಹಾಜರಾಗುವ ಸಾಧ್ಯತೆ ಇದೆ.
ಅಯೋಧ್ಯೆಯಲ್ಲಿ ರಾಮಮಂದಿರ ಇದ್ದ ಜಾಗದಲ್ಲಿ ಬಾಬರಿ ಮಸೀದಿ ನಿರ್ಮಿಸಲಾಗಿದೆ ಎಂದು 1992ರ ಡಿಸೆಂಬರ್ 6ರಂದು ಕರಸೇವಕರು ಮಸೀದಿಯನ್ನು ಧ್ವಂಸ ಮಾಡಿದ್ದರು. ಸುಪ್ರೀಂಕೋರ್ಟ್ ಕಳೆದ ವರ್ಷ ತೀರ್ಪು ನೀಡಿದ್ದು ರಾಮಮಂದಿರ ನಿರ್ಮಾಣಕ್ಕೆ ವಿವಾದಿತ ಜಾಗ ಗೊತ್ತುಪಡಿಸಿ ಮಸೀದಿ ನಿರ್ಮಾಣಕ್ಕೆ ಪರ್ಯಾಯ ಭೂಮಿ ಒದಗಿಸಲಾಗಿದೆ.