ದಕ್ಷಿಣ ಅಮೇರಿಕಾದ ಅಮೆಜಾನ್ ನದಿಯಲ್ಲಿರುವ ಅಪಾಯಕಾರಿ ಪ್ರಭೇದದ ಕ್ಯಾಟ್ ಫಿಶ್ ವಾರಾಣಸಿಯ ಗಂಗಾ ನದಿಯಲ್ಲಿ ಪತ್ತೆಯಾಗಿ ಭೀತಿ ಹುಟ್ಟಿಸಿದೆ. ಈ ಮೀನು ನದಿ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದ್ದು, ಪ್ರಾಣಿಶಾಸ್ತ್ರಜ್ಞರು ಕೂಡ ಕಳವಳಗೊಂಡಿದ್ದಾರೆ.
ಭಾರತೀಯ ವನ್ಯಜೀವಿ ಸಂಸ್ಥೆ ಹಾಗೂ ನಮಾಮಿ ಗಂಗಾ ಕಾರ್ಯಕ್ರಮದಡಿ ನದಿ, ನೀರು, ಮೀನು, ಡಾಲ್ಫಿನ್ ಗಳ ರಕ್ಷಣೆಗಾಗಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಗೆ ಈ ಮೀನು ದಕ್ಷಿಣ ಕಾಶಿಯ ರಾಮ್ನಾ ಎಂಬ ಹಳ್ಳಿಯಲ್ಲಿ ಸಿಕ್ಕಿದ್ದು, ಬನಾರಸ್ ಹಿಂದು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗಕ್ಕೆ ಕಳುಹಿಸಿಕೊಡಲಾಗಿದೆ ಎಂದು ಕಾವಲುಗಾರ ದರ್ಶನ್ ನಿಶಾದ್ ತಿಳಿಸಿದ್ದಾರೆ.
ಈ ಕುರಿತು ವಿವರಣೆ ನೀಡಿರುವ ಪ್ರಾಣಿಶಾಸ್ತ್ರಜ್ಞ ಪ್ರೊ. ಬೆಚನ್ ಲಾಲ್, ಹೈಪೋಸ್ಟಮಸ್ ಪ್ಲೆಕೋಸ್ಟಮಸ್ ಎಂಬ ವೈಜ್ಞಾನಿಕ ಹೆಸರಿನಿಂದ ಗುರುತಿಸುವ ಇವು ನಮ್ಮ ಭಾರತದ್ದಲ್ಲ. ಅಮೆಜಾನ್ ಕಾಡಿನಲ್ಲಿರುವ ನದಿಯಲ್ಲಿ ಕಾಣಸಿಗುವ ಇದು, ಇತ್ತೀಚೆಗೆ ತೆಲಂಗಾಣದಲ್ಲೂ ಪತ್ತೆಯಾಗಿತ್ತು ಎಂದಿದ್ದಾರೆ.