ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ವಿಶ್ವದಲ್ಲಿ ತಲ್ಲಣ ಮೂಡಿಸಿದ್ದು, ಇದೇ ಹೊತ್ತಲ್ಲಿ ಚೀನಾದ ಮತ್ತೊಂದು ವೈರಸ್ ಆತಂಕ ತಂದಿದೆ.
ಚೀನಾದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಕ್ಯಾಟ್ ಕ್ಯೂ ವೈರಸ್(CQV) ಭಾರತದಲ್ಲಿ ಕಾಯಿಲೆ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ವಿಜ್ಞಾನಿಗಳು ತಿಳಿಸಿದ್ದಾರೆ.
ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೋವಿಡ್-19 ವೈರಸ್ ಕಾಣಿಸಿಕೊಂಡಿತ್ತು. ಚೀನಾ ಮತ್ತು ವಿಯೆಟ್ನಾಂಗಳಲ್ಲಿ ಕ್ಯಾಟ್ ಕ್ಯೂ ವೈರಸ್ ಕಂಡುಬಂದಿದೆ. ಆರ್ಥ್ರೋ ಪಾಡ್ -ಬೋರ್ನೆ ವೈರಸ್ ಗಳಲ್ಲಿ ಒಂದಾಗಿರುವ ಕ್ಯಾಟ್ ಕ್ಯೂ ವೈರಸ್ ಹಂದಿಗಳು ಮತ್ತು ಕ್ಯುಲೆಕ್ಸ್ ಸೊಳ್ಳೆಗಳಲ್ಲಿದ್ದು, ಭಾರತದಲ್ಲಿ ಇದೇ ಮಾದರಿಯ ಕ್ಯುಲೆಕ್ಸ್ ಸೊಳ್ಳೆಗಳು ಇವೆ.
ಇದನ್ನು ಆಧರಿಸಿ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವಿಜ್ಞಾನಿಗಳು ಕ್ಯುಲೆಕ್ಸ್ ಸೊಳ್ಳೆಗಳ ಪ್ರತಿರೋಧಗಳ ಪತ್ತೆಗೆ ಪರೀಕ್ಷೆ ನಡೆಸಿದ್ದಾರೆ. ಮನುಷ್ಯರಲ್ಲಿ ಸಂಗ್ರಹಿಸಲಾದ ಯಾವುದೇ ಮಾದರಿಗಳಲ್ಲಿ ವೈರಸ್ ಪತ್ತೆಯಾಗಿಲ್ಲದಿದ್ದರೂ ಮೈನಾ ಹಕ್ಕಿಗಳು ಮತ್ತು ಹಂದಿಗಳಲ್ಲಿ ವೈರಸ್ ಕಂಡುಬಂದಿದೆ. ಇದು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.