34 ವರ್ಷದ ಕೊರೊನಾ ಪೀಡಿತನೊಬ್ಬ ತಾನು ಸಾಯುವ ಮುನ್ನ ಕಳಿಸಿದ ಸಂದೇಶ ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ವೀಕ್ಷಿಸಿದ ಪ್ರತಿಯೊಬ್ಬರು ಒಂದು ಕ್ಷಣ ಭಾವುಕರಾಗಿಬಿಡುತ್ತಾರೆ. ಹೈದ್ರಾಬಾದ್ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಆತ, ತನ್ನ ತಂದೆಗೆ ತಾನು ಅನುಭವಿಸಿದ ನೋವನ್ನು ವಿವರಿಸಲು ವಿಡಿಯೋ ಸಂದೇಶ ಕಳಿಸಿದ್ದ.
ಉಸಿರಾಡಲು ನನಗೆ ಸಾಧ್ಯವಾಗುತ್ತಿಲ್ಲ, ನಾನು ಎಷ್ಟೇ ಮನವಿ ಮಾಡಿದರು ಕಳೆದ 3 ಗಂಟೆಗಳಿಂದ ಆಕ್ಸಿಜನ್ ನೀಡಿಲ್ಲ. ನನಗೆ ಇನ್ನೂ ಉಸಿರಾಡಲು ಸಾಧ್ಯವಾಗುತ್ತಿಲ್ಲ ಡ್ಯಾಡಿ, ನನ್ನ ಹೃದಯ ನಿಂತುಹೋಗುತ್ತಿದೆ, ಬೈ ಡ್ಯಾಡಿ ಎಂದು ಆತ ಕಳಿಸಿದ ವಿಡಿಯೋದಲ್ಲಿ ನೋಡಬಹುದು.
ಹೈದ್ರಾಬಾದ್ ನ ಹತ್ತು ಖಾಸಗಿ ಆಸ್ಪತ್ರೆಗಳು ಮಗನಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಸಂತ್ರಸ್ತನ ತಂದೆ ಹೇಳಿದ್ದಾರೆ.
ನನ್ನ ಮಗನಿಗೆ ಏಕೆ ಆಕ್ಸಿಜನ್ ನಿರಾಕರಿಸಲಾಯಿತು? ಬೇರೆ ಯಾರಿಗಾದರೂ ಅದು ತುರ್ತಾಗಿ ಅಗತ್ಯವಿತ್ತೇ? ಎಂದು ಪ್ರಶ್ನಿಸಿರುವ ಅವರು, ನನ್ನ ಮಗನ ಮಾತುಗಳನ್ನು ಕೇಳಿ ಹೃದಯವೇ ಹೋದಂತಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಈ ನಡುವೆ ಆಸ್ಪತ್ರೆಯು ಆರೋಪವನ್ನು ನಿರಾಕರಿಸಿದ್ದು, ರೋಗಿಯು ಮಯೋಕಾರ್ಡಿಟಿಸ್ ನಿಂದ ಬಳಲುತ್ತಿದ್ದರು, ಹೀಗಾಗಿ ಹಠಾತ್ ಸಾವಿಗೆ ತುತ್ತಾದರು ಎಂದು ಹೇಳಿದೆ. ಅವರು ನಿಧನರಾದ ನಂತರ ಅದೇ ದಿನ ಅಂತ್ಯಕ್ರಿಯೆ ನಡೆಸಲಾಯಿತು. ಖಾಸಗಿ ಆಸ್ಪತ್ರೆಯ ವರದಿಯ ಪ್ರಕಾರ ಅವರಿಗೆ ಕೋವಿಡ್ 19 ಇತ್ತೆಂದು ಹೇಳಲಾಗಿದೆ.