
ಎರಡು ಡೋಸ್ ಲಸಿಕೆಗಳನ್ನ ಪಡೆಯದ ಹಾಗೂ ಕೊರೊನಾ ನೆಗೆಟಿವ್ ರಿಪೋರ್ಟ್ ಹೊಂದಿರದ ಅಭ್ಯರ್ಥಿಗಳಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಇಲ್ಲ ಎಂದು ಚುನಾವಣಾ ಆಯೋಗ ಕೇಳಿದೆ. ಚುನಾವಣಾ ಆಯೋಗ ನಿನ್ನೆಯಷ್ಟೇ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಯಾವುದೇ ವಿಜಯದ ಸಂಭ್ರಮಾಚರಣೆಗೆ ಬ್ರೇಕ್ ಹೇರಿತ್ತು.
ಇದು ಮಾತ್ರವಲ್ಲದೇ ಮೇ 2ನೇ ತಾರೀಖಿನಿಂದ ಮತ ಕೇಂದ್ರಗಳ ಹೊರಗೆ ಜನರು ಜಮಾಯಿಸೋದಕ್ಕೂ ನಿರ್ಬಂಧ ಹೇರಿದೆ. ಅಭ್ಯರ್ಥಿಗಳು ಹಾಗೂ ಅವರ ಏಜೆಂಟ್ಗಳು ನೆಗೆಟಿವ್ ರಿಪೋರ್ಟ್ ಹಾಗೂ ಕೊರೊನಾ ಎರಡೂ ಡೋಸ್ಗಳನ್ನ ಹೊಂದಿರೋದು ಕಡ್ಡಾಯ ಎಂದು ಹೇಳಿದೆ. ಫಲಿತಾಂಶಕ್ಕೂ ಮೂರು ದಿನಗಳ ಮುಂಚೆ ಏಜೆಂಟ್ಗಳ ಪಟ್ಟಿಯನ್ನ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ದೇಶದಲ್ಲಿ ಕೊರೊನಾ ಎರಡನೇ ಅಲೆಗೆ ಕೇಂದ್ರ ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ದೇಶದಲ್ಲಿ ಕೊರೊನಾ ವೈರಸ್ ಇರುವಾಗಲೇ ಪಂಚರಾಜ್ಯಗಳ ಚುನಾವಣೆಗಳನ್ನ ನಡೆಸಿ ಬೃಹತ್ ರ್ಯಾಲಿಗಳಿಗೆ ಅವಕಾಶ ಮಾಡಿಕೊಟ್ಟು ಸೋಂಕು ಹೆಚ್ಚಾಗಲು ಕಾರಣವಾದ ಚುನಾವಣಾ ಆಯೋಗದ ವಿರುದ್ಧ ಕೊಲೆ ಕೇಸ್ ದಾಖಲಿಸಬಹುದು ಎಂದು ಹೇಳುವ ಮೂಲಕ ತರಾಟೆಗೆ ತೆಗೆದುಕೊಂಡಿತ್ತು. ಮದ್ರಾಸ್ ಹೈಕೋರ್ಟ್ ಛಾಟಿ ಬಳಿಕ ಚುನಾವಣಾ ಆಯೋಗ ಒಂದೊಂದೆ ನಿರ್ಬಂಧಗಳನ್ನ ವಿಧಿಸುತ್ತಿದೆ.