ಭಾರತದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದ್ದು, ಬ್ಲಾಕ್ ಫಂಗಸ್ ಪ್ರಕರಣಗಳು ತೀವ್ರವಾಗಿ ಏರುತ್ತಿದೆ. ಈ ಮಧ್ಯೆ ತಜ್ಞರು ಮಹತ್ವದ ಸೂಚನೆ ನೀಡಿದ್ದಾರೆ. ಬ್ಲಾಕ್ ಫಂಗಸ್ ಕೋವಿಡ್ ಇಲ್ಲದೆ ಸಂಭವಿಸಬಹುದು. ಆದ್ದರಿಂದ ರಕ್ತದಲ್ಲಿ ಹೆಚ್ಚು ಸಕ್ಕರೆ ಮಟ್ಟ ಹೊಂದಿರುವವರು ಎಚ್ಚರದಿಂದಿರಬೇಕೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೊರೊನಾಗಿಂತ ಮೊದಲೇ ಈ ಬ್ಲಾಕ್ ಫಂಗಸ್ ಇದೆ. ಮಧುಮೇಹ ರೋಗಿಗಳಿಗೆ ಇದು ಕಾಡಲಿದೆ ಎಂಬ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಅನಿಯಂತ್ರಿತ ಮಧುಮೇಹ ಹೊಂದಿರುವ ಜನರಿಗೆ ಈ ಸೋಂಕು ಕಾಡುವ ಅಪಾಯ ಮೊದಲಿನಿಂದಲೂ ಹೆಚ್ಚಿದೆ. ಅನಿಯಂತ್ರಿತ ಮಧುಮೇಹದ ಜೊತೆ ಕೆಲ ಕಾಯಿಲೆಗಳು ಬ್ಲಾಕ್ ಫಂಗಸ್ ಗೆ ಕಾರಣವಾಗುತ್ತದೆ.
ಬ್ಲಾಕ್ ಫಂಗಸ್ ಕಾಡಿದವರ ರಕ್ತದಲ್ಲಿನ ಸಕ್ಕರೆ ಮಟ್ಟವು 700-800ಗೆ ತಲುಪುತ್ತದೆ. ಬ್ಲಾಕ್ ಫಂಗಸ್ ದಾಳಿ, ಮಕ್ಕಳು ಮತ್ತು ವಯಸ್ಸಾದವರಲ್ಲಿ ಇರುವುದು ಸಾಮಾನ್ಯ ಎಂದು ನೀತಿ ಆಯೋಗದ ಸದಸ್ಯ ಡಾ. ಪಾಲ್ ಹೇಳಿದ್ದಾರೆ. ಮಧುಮೇಹ, ಕೋಲ್ಡ್ ಆಕ್ಸಿಜನ್ ಹಾಗೂ ತೊಳೆಯದ ಮಾಸ್ಕ್ ಬ್ಲಾಕ್ ಫಂಗಸ್ ಗೆ ಕಾರಣವಾಗುತ್ತದೆ. ನ್ಯುಮೋನಿಯಾದಂತಹ ಯಾವುದೇ ಕಾಯಿಲೆಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತವೆ. ಸ್ಟೀರಾಯ್ಡ್ ನ ಬಳಕೆ ಬ್ಲಾಕ್ ಫಂಗಸ್ ಹೆಚ್ಚಿಸುತ್ತದೆ ಎಂದು ಡಾಕ್ಟರ್ ಪಾಲ್ ಹೇಳಿದ್ದಾರೆ.