ಗುಜರಾತ್ ನಲ್ಲಿ ಡಿಸೆಂಬರ್ 1 ರಂದು ಮೊದಲ ಹಂತದ ವಿಧಾನಸಭೆ ಚುನಾವಣೆ ನಡೆಯಲಿದ್ದು, 89 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ ಬಿದ್ದಿದೆ.
ಅಭ್ಯರ್ಥಿಗಳಿಗೆ ಮನೆಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಇರುತ್ತದೆ. ಡಿಸೆಂಬರ್ 1 ರಂದು ಮೊದಲ ಹಂತದಲ್ಲಿ 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 19 ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಸಲಾಗುವುದು. ಡಿಸೆಂಬರ್ 5 ರಂದು ಎರಡನೇ ಹಂತದಲ್ಲಿ ಉಳಿದ 93 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಎಲ್ಲಾ ಫಲಿತಾಂಶ ಪ್ರಕಟವಾಗಲಿದೆ.
ಆಮ್ ಆದ್ಮಿ ಪಕ್ಷವು(ಎಎಪಿ) ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಪ್ರತಿಪಕ್ಷ ಕಾಂಗ್ರೆಸ್ ನೊಂದಿಗೆ ತೀವ್ರ ತ್ರಿಕೋನ ಹೋರಾಟದಲ್ಲಿ ತೊಡಗಿದೆ.
ಮೊದಲ ಹಂತದ ಚುನಾವಣೆಯಲ್ಲಿ 39 ರಾಜಕೀಯ ಪಕ್ಷಗಳಿಂದ 788 ಅಭ್ಯರ್ಥಿಗಳು ಮತ್ತು 339 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಗುಜರಾತ್‌ನ ಮುಖ್ಯ ಚುನಾವಣಾ ಕಚೇರಿ(ಸಿಇಒ) ತಿಳಿಸಿದೆ.
1995 ರಿಂದ ಗುಜರಾತ್ ಅನ್ನು ಆಳುತ್ತಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೆಲೆಯಾಗಿರುವ ರಾಜ್ಯದಲ್ಲಿ ಸತತ ಏಳನೇ ಅವಧಿಗೆ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದೆ.