ನವದೆಹಲಿ: ಅಣೆಕಟ್ಟುಗಳ ನಿರ್ವಹಣೆಗಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಈ ಹೊಸ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
19 ರಾಜ್ಯಗಳಲ್ಲಿರುವ 736 ಡ್ಯಾಮ್ ಗಳ ನಿರ್ವಹಣೆಗಾಗಿ ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ 10 ವರ್ಷಗಳ ಕಾಲ ಡ್ಯಾಂಗಳನ್ನು ನಿರ್ವಹಣೆ ಮಾಡಲು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಇದಕ್ಕಾಗಿ 10,211 ಕೋಟಿ ರೂಪಾಯಿ ನೆರವು ನೀಡಲಾಗುವುದು. ಸಿಸ್ಟಮ್ ವೈಡ್ ಮ್ಯಾನೇಜ್ಮೆಂಟ್ ವಿಧಾನದೊಂದಿಗೆ ದೇಶಾದ್ಯಂತ ಆಯ್ದ ಅಣೆಕಟ್ಟುಗಳ ಸುರಕ್ಷತೆ ಮತ್ತು ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ಸುಧಾರಿಸುವುದು ಯೋಜನೆಯ ಉದ್ದೇಶವಾಗಿದೆ. ಅಲ್ಲದೇ, ಡ್ಯಾಂಗಳ ಸುರಕ್ಷತೆ ಮತ್ತು ದೇಶದ ಜನರಿಗೆ ನೀರಿನ ಭದ್ರತೆ ಒದಗಿಸುವುದು, ಅಭಿವೃದ್ಧಿ ಕೆಲಸಗಳ ಮೂಲಕ ಉದ್ಯೋಗ ಸೃಷ್ಟಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಎರಡು ಹಂತಗಳಲ್ಲಿ ಯೋಜನೆ ಜಾರಿಗೊಳಿಸಲಾಗುವುದು. ಏಪ್ರಿಲ್ 2021 ರಿಂದ ಮಾರ್ಚ್ 2031 ಜಾರಿಯಲ್ಲಿರುತ್ತದೆ. ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಯೋಜನೆಯಲ್ಲಿ ಸೇರಿಸಲಾದ ಅಣೆಕಟ್ಟುಗಳನ್ನು ಕೇಂದ್ರ ಏಜೆನ್ಸಿಗಳು ನಿರ್ವಹಿಸುತ್ತಿವೆ. ಸಂಬಂಧಿಸಿದ ರಾಜ್ಯ ಸರ್ಕಾರಗಳು ಸ್ಥಳೀಯವಾಗಿ ಅಣೆಕಟ್ಟು ನಿರ್ವಹಿಸುತ್ತಿವೆ. ಯೋಜನೆಗಾಗಿ ಅಣೆಕಟ್ಟುಗಳನ್ನು ಆಯಾ ರಾಜ್ಯ ಸರ್ಕಾರಗಳು ಗುರುತಿಸುತ್ತವೆ ಎಂದು ಹೇಳಿದ್ದಾರೆ.
ಕೇಂದ್ರದ ಬಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (ಬಿಬಿಎಂಬಿ) ಸೇರಿದಂತೆ 19 ರಾಜ್ಯಗಳ 736 ಅಣೆಕಟ್ಟುಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಲಾಗಿದೆ.