ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಚಾರ್ಟರ್ಡ್ ಅಕೌಂಟೆಂಟ್ಸ್(ಸಿಎ) ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ.
ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಮೇ/ಜುಲೈ ತಿಂಗಳಿನಲ್ಲಿ ನಡೆಯಬೇಕಿತ್ತು. ಮೇ ಮತ್ತು ನವೆಂಬರ್ ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಸಂಯೋಜಿಸಿ ಈ ವರ್ಷದ ನವೆಂಬರ್ ನಲ್ಲಿ ನಡೆಸಲಾಗುವುದು.
ಚಾರ್ಟರ್ಡ್ ಅಕೌಂಟೆಂಟ್ಸ್ ಪರೀಕ್ಷೆ ರದ್ದು ಮಾಡಿರುವ ಕುರಿತಾಗಿ ಐಸಿಎಐ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಮೊದಲು ಸಿಎ ಪರೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಕೊರೋನಾ ಲಾಕ್ಡೌನ್ ಕಾರಣದಿಂದ ಜುಲೈಗೆ ಮುಂದೂಡಲಾಗಿತ್ತು. ಜುಲೈ 29 ರಿಂದ ಆಗಸ್ಟ್ 16 ರ ನಡುವೆ ಪರೀಕ್ಷೆ ನಡೆಸಲು ಯೋಜನೆ ನಡೆಸಲಾಗಿತ್ತು. ಆದರೆ, ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮೇ 2020 ರ ಸಿಎ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.
ಮೇನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ನವೆಂಬರ್ ನಲ್ಲಿ ನಡೆಯುವ ಪರೀಕ್ಷೆಯ ಜೊತೆಗೇ ನಡೆಸಲಾಗುವುದು. ಪರೀಕ್ಷೆಗೆ ಪಾವತಿಸಿದ ಶುಲ್ಕ ಮತ್ತು ವಿನಾಯಿತಿಗಳು ಮುಂದುವರೆಯಲಿವೆ. ಮೇ ತಿಂಗಳಲ್ಲಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ನವಂಬರ್ ಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಪರೀಕ್ಷಾ ಕೇಂದ್ರ ಬದಲಾಯಿಸುವ ಆಯ್ಕೆಯನ್ನು ನೀಡಲಾಗುವುದು. ಚಾಲ್ತಿಯಲ್ಲಿರುವ ಷರತ್ತುಗಳಿಗೆ ಒಳಪಟ್ಟು ನವಂಬರ್ 1ರಿಂದ ಪರೀಕ್ಷೆಯನ್ನು ಆರಂಭಿಸುವ ಚಿಂತನೆ ಇದೆ ಎಂದು ಹೇಳಲಾಗಿದೆ.