ಭುವನೇಶ್ವರ್ (ಒಡಿಶಾ): ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ವ್ಯಾಪಾರ ಇಲ್ಲದೆ ಸಾಕಷ್ಟು ಅನುಭವಿಸಿದ್ದ ಬಟ್ಟೆ ವ್ಯಾಪಾರಿಯೊಬ್ಬ ಯೂಟ್ಯೂಬ್ ವಿಡಿಯೋದಿಂದ ಪ್ರೇರಿತನಾಗಿ 2 ಬ್ಯಾಂಕ್ ಗಳನ್ನು ದರೋಡೆ ಮಾಡಿದ್ದಾನೆ.
ಭುವನೇಶ್ವರದ ತಂಗಿಬಂಟ ಗ್ರಾಮದ ಬಟ್ಟೆ ವ್ಯಾಪಾರಿ ಸೌಮ್ಯರಾಜನ್ ಜೆನ (25) ಸಿಕ್ಕಿಬಿದ್ದ ಆರೋಪಿಯಾಗಿದ್ದು, ಎರಡು ಬ್ಯಾಂಕ್ ಗಳಲ್ಲಿ ದರೋಡೆ ಮಾಡಿದ್ದ 12 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಾಟಕ್ ನಗರ ಪೊಲೀಸ್ ಆಯುಕ್ತ ಎಸ್. ಸಾರಂಗಿ, ಆರೋಪಿಯು ಓರ್ವ ಬಟ್ಟೆ ವ್ಯಾಪಾರಿಯಾಗಿದ್ದು, ನಷ್ಟ ಅನುಭವಿಸಿದ್ದರಿಂದ ದರೋಡೆಗಿಳಿದಿದ್ದಾನೆ. ಸೆಪ್ಟೆಂಬರ್ 7 ರಂದು ಇನ್ಫೋಸಿಟಿ ಪ್ರದೇಶದ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ ದರೋಡೆ ಮಾಡಿದ್ದು, ಸೆಪ್ಟೆಂಬರ್ 28 ರಂದು ಮಂಚೇಶ್ವರ್ ಪ್ರದೇಶದ ಬರಿಮುಂಡ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದರೋಡೆ ನಡೆಸಿದ್ದಾನೆ. ಎರಡೂ ಕಡೆ ಹೆಲ್ಮೆಟ್ ಧರಿಸಿ, ಆಟದ ಸಾಮಾನಿನ ಪಿಸ್ತೂಲ್ ತೋರಿಸಿ, ಹೆದರಿಸಿ ದೋಚಿದ್ದಾನೆ. ಯೂಟ್ಯೂಬ್ ವಿಡಿಯೋ ನೋಡಿ ದರೋಡೆ ಮಾಡುವುದನ್ನು ಕಲಿತದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆತನಿಂದ 10 ಲಕ್ಷ ರೂ. ನಗದು, ದರೋಡೆಗೆ ಬಳಸಿದ ವಾಹನ, ಆಟದ ಸಾಮಾನಿನ ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.