ಕೊರೋನಾ ಲಾಕ್ ಡೌನ್ ವೇಳೆ ನಡೆದ ಚಿತ್ರ ವಿಚಿತ್ರ ಘಟನೆಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸಹೋದರರಿಬ್ಬರು ಅರಣ್ಯದಂಚಿನ ವಾಚ್ ಟವರ್ ಏರಿ ಕ್ವಾರಂಟೈನ್ ಆಗಿ ಸುದ್ದಿಯಾಗಿದ್ದಾರೆ.
ಮಾಲಿಭಿತಾ ಗ್ರಾಮದ ಅಮರ್ ಬಹದ್ದೂರ್ ರಾಯ್ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ತಮ್ಮ ಕೆಲಸದ ಸ್ಥಳದಿಂದ ಗ್ರಾಮಕ್ಕೆ ವಾಪಸಾಗಿದ್ದರು. ಅವರನ್ನು ಕರೆತರಲು ಸಹೋದರ ಗ್ರಾಮದಿಂದ ತೆರಳಿದ್ದರು.
ಇವರಿಬ್ಬರು ವಾಪಸಾದ ಬಳಿಕ ಕೊರೋನಾ ಕಾರಣಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದರು. ಜೊತೆಗೆ 14 ದಿನ ಕ್ವಾರಂಟೈನ್ ಅವಧಿಯಲ್ಲಿ ಇಬ್ಬರೂ ಗ್ರಾಮದಿಂದ ಹೊರಗಿರಬೇಕೆಂದು ಕೇಳಿಕೊಂಡರು.
ಹೀಗಾಗಿ ತಮ್ಮ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರ ಸುರಕ್ಷತೆಯ ದೃಷ್ಟಿಯಿಂದ ಅವರಿಬ್ಬರು ಹಳ್ಳಿಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ವಾಚ್ ಟವರ್ ಮೇಲೆ ಜೂನ್ ಹತ್ತರಿಂದ ಕ್ವಾರಂಟೈನ್ ಆಗಿದ್ದಾರೆ.
ಈ ಗ್ರಾಮ ಬೆಲಕೋಬಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರಲಿದ್ದು, ಅದು ಆನೆ ಕಾರಿಡಾರ್ ಆಗಿದೆ. ಹೀಗಾಗಿ ಸುತ್ತಮುತ್ತಲ ಗ್ರಾಮಕ್ಕೆ ಆನೆಗಳು ಬರುವುದನ್ನು ಗಮನಿಸಲು ವಾಚ್ ಟವರ್ ಸ್ಥಾಪಿಸಲಾಗಿದೆ. ಈ ವಾಚ್ ಟವರ್ ಕ್ವಾರಂಟೈನ್ ಈಗ ಕೇಂದ್ರವಾಗಿದೆ.