ಪ್ರಧಾನಿ ನರೇಂದ್ರ ಮೋದಿಯವರು ಮಹಾಮಾರಿ ಕೊರೊನಾ ವಿರುದ್ದದ ಹೋರಾಟಕ್ಕಾಗಿ ಜಗತ್ತಿನ ಅತಿ ದೊಡ್ಡ ಲಸಿಕೆ ನೀಡುವ ಅಭಿಯಾನಕ್ಕೆ ಇಂದು ಚಾಲನೆ ನೀಡಿದ್ದಾರೆ.
ಈ ಮೂಲಕ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ʼಸಂಜೀವಿನಿʼ ನೀಡಿಕೆ ಕಾರ್ಯ ಆರಂಭವಾಗಿದ್ದು, ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗಳಾದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ.
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎಂಬ ಎರಡು ಲಸಿಕೆಗಳನ್ನು ಇಂದಿನಿಂದ ನೀಡಲಾಗುತ್ತಿದ್ದು, ಇವೆರೆಡೂ ಕೂಡಾ ಭಾರತದಲ್ಲೇ ತಯಾರಾಗಿರುವುದು ವಿಶೇಷ. ಅಲ್ಲದೇ ಭಾರತದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗುತ್ತಿದ್ದು, ಲಸಿಕೆ ನೀಡಿಕೆ ಕಾರ್ಯಕ್ರಮದಿಂದಾಗಿ ಮುಂದಿನ ದಿನಗಳಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ.
ದೇಶದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಇಳಿಕೆಯಾಗುತ್ತಿರುವ ಕಾರಣ ಕಳೆದ ಒಂಭತ್ತು ತಿಂಗಳಿನಿಂದ ಬಂದ್ ಆಗಿದ್ದ ಶಾಲಾ – ಕಾಲೇಜುಗಳು ಹಂತಹಂತವಾಗಿ ಆರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲಾ – ಕಾಲೇಜುಗಳು ಆರಂಭವಾಗಲಿವೆ.
ಲಾಕ್ ಡೌನ್ ಕಾರಣಕ್ಕೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಉದ್ಯಮಗಳೂ ಸಹ ಆರಂಭವಾಗಿದ್ದು, ಈಗ ಕೊರೊನಾ ಲಸಿಕೆ ಲಭ್ಯವಾಗಿರುವ ಕಾರಣ ಆರ್ಥಿಕ ಪರಿಸ್ಥಿತಿ ಮತ್ತೆ ಹಳಿಗೆ ಬರುವ ನಿರೀಕ್ಷೆಯಿದೆ.