ನವದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಹಾಗೂ ರೈತರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಪ್ರತಿಭಟನಾ ನಿರತ ರೈತರು ದೆಹಲಿಯ ಕೆಂಪುಕೋಟೆಗೆ ಲಗ್ಗೆಯಿಟ್ಟಿದ್ದಾರೆ.
ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್ ಪರೇಡ್ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಷ್ಟ್ರ ರಾಜಧಾನಿ ರಣರಂಗವಾಗಿ ಪರಿಣಮಿಸಿದೆ. ಸಿಂಘಿ ಗಡಿ ಮೂಲಕವಾಗಿ ದೆಹಲಿ ನಗರಕ್ಕೆ ಲಗ್ಗೆ ಇಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ ನಡೆಸುತ್ತಿದ್ದಂತೆಯೇ ರೊಚ್ಚಿಗೆದ್ದ ರೈತರು ಟ್ರಾಕ್ಟರ್ ಮೂಲಕವೇ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ.
ರೈತರ ಟ್ರ್ಯಾಕ್ಟರ್ ರ್ಯಾಲಿ ತಡೆಯಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ರಸ್ತೆಗಳಲ್ಲಿ ಅಡ್ಡಲಾಗಿ ನಿಲ್ಲಿಸಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ, ಟ್ರ್ಯಾಕ್ಟರ್, ಕ್ರೇನ್, ಜೆಸಿಬಿ ಮೂಲಕ ನುಗ್ಗಿದ ರೈತರು ಕೆಂಪುಕೋಟೆಗೆ ಲಗ್ಗೆಯಿಟ್ಟಿದ್ದಾರೆ. ಕೆಂಪುಕೋಟೆಯ ಧ್ವಜಾರೋಹಣ ಸ್ಥಳಕ್ಕೆ ನುಗ್ಗಿದ ರೈತರು ಕೆಂಪುಕೋಟೆಯಲ್ಲಿ ಕಿಸಾನ್ ಯೂನಿಯನ್ ಧ್ವಜಾರೋಹಣ ನೆರವೇರಿಸಿದ್ದಾರೆ.
ದೆಹಲಿಯ ಹೃದಯಭಾಗದಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಮುಂಜಾಗೃತಾ ಕ್ರಮವಾಗಿ 11 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದ್ದು, ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.