ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅನಿಲ್ ದೇಶ್ ಮುಖ್ ವಿರುದ್ಧ ಲಂಚಕ್ಕೆ ಬೇಡಿಕೆಯೊಡ್ದಿದ್ದಾಗಿ ಆರೋಪಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ದೇಶ್ ಮುಖ್ ರಾಜೀನಾಮೆ ನೀಡಿದ್ದಾರೆ.
ಗೃಹ ಸಚಿವ ಅನಿಲ್ ದೇಶ್ ಮುಖ್, ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ತಿಂಗಳಿಗೆ 100 ಕೋಟಿ ಸಂಗ್ರಹಿಸುವಂತೆ ಸೂಚಿಸಿದ್ದರು ಎಂದು ಪರಮ್ ಬೀರ್ ಸಿಂಗ್, ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಅಲ್ಲದೇ ಪರಮ್ ಬೀರ್ ಸಿಂಗ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅನಿಲ್ ದೇಶ್ ಮುಖ್ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಅನಿಲ್ ದೇಶ್ ಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.