ನವದೆಹಲಿ: ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದು, ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಹೊಸ ಶಿಕ್ಷಣ ನೀತಿಯ ಅನ್ವಯ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಉಪಾಹಾರವನ್ನು ಕೂಡ ಶಾಲೆಗಳಲ್ಲಿ ಉಚಿತವಾಗಿ ನೀಡಲು ಸರ್ಕಾರ ಮುಂದಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಕುರಿತಾಗಿ ಪ್ರಸ್ತಾಪಿಸಿದ್ದು ಮಕ್ಕಳು ಬೌದ್ಧಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಪೌಷ್ಟಿಕಾಂಶವುಳ್ಳ ಆಹಾರ ಉಪಾಹಾರ ನೀಡಲು ಸಲಹೆ ನೀಡಲಾಗಿದೆ. ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗ್ಗಿನ ಉಪಾಹಾರವನ್ನು ಕೂಡ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಪೌಷ್ಠಿಕಾಂಶವಿರುವ ಆಹಾರ ಸೇವಿಸದಿದ್ದರೆ ಮಕ್ಕಳಲ್ಲಿ ಗರಿಷ್ಠ ಕಲಿಕೆಯ ಕೊರತೆ ಕಂಡು ಬರಬಹುದೆಂಬ ಕಾರಣಕ್ಕೆ ಮಕ್ಕಳ ಪೋಷಣೆ ಮತ್ತು ಆರೋಗ್ಯಕ್ಕೆ ಒತ್ತು ನೀಡಲು ಮುಂದಾಗಿದ್ದು ಬೆಳಗಿನ ಉಪಾಹಾರದಿಂದ ಮಕ್ಕಳ ಅರಿವು ಮತ್ತು ಕಲಿಕೆ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.