ಜೀವನದ ಕಠಿಣ ಹಾದಿಯನ್ನು ದಿಟ್ಟವಾಗಿ ಎದುರಿಸುತ್ತಲೇ ಸಾಗಿದ ಜಾರ್ಖಂಡ್ನ 62 ವರ್ಷದ ಚುಟ್ನಿ ಮಹಾತೋ, ಈ ವರ್ಷದ ಗಣತಂತ್ರೋತ್ಸವದ ವೇಳೆ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಮಾಟಗಾತಿ ಎಂಬೆಲ್ಲಾ ಆಪಾದನೆ ಎದುರಿಸಿ, ಈ ಮಿಥ್ಯೆಯ ಕಾರಣದಿಂದಲೇ ಗ್ರಾಮಸ್ಥರಿಂದ ಕೊಲೆಯಾಗಿಬಿಡುವ ಹಂತ ತಲುಪಿದ್ದ ಮಹಾತೋ ತಮ್ಮ ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದ ಕಾರಣದಿಂದ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವಕ್ಕೆ ಭಾಜನರಾಗಿದ್ದಾರೆ.
ರಾಂಚಿಯಿಂದ 130 ಕಿಮೀ ದೂರದಲ್ಲಿರುವ ಬೋಲಾದಿ ಗ್ರಾಮದವರಾದ ಚುಟ್ನಿ, ತಮ್ಮ 12ನೇ ವಯಸ್ಸಿಗೇ ವಿವಾಹವಾದರು. ಶಿಕ್ಷಣದಿಂದ ವಂಚಿತರಾಗಿದ್ದ ಇವರಂತೆಯೇ ಸಾಕಷ್ಟು ಮಂದಿ ವಿವಾಹಿತ ಹೆಂಗಸರು ಕಷ್ಟದ ದಿನಗಳನ್ನು ತಳ್ಳುತ್ತಿದ್ದರು. 1995ರಲ್ಲಿ ಚುಟ್ನಿಯ ಹಿರಿಯ ಸಹೋದರನಿಗೆ ಅನಾರೋಗ್ಯ ಉಂಟಾದಾಗ, ಆಕೆ ಮಾಟ ಮಂತ್ರ ಮಾಡಿರಬಹುದು ಎಂದೆಲ್ಲಾ ಹೇಳಲಾಗಿತ್ತು. ಈ ಗಾಳಿ ಮಾತನ್ನೆಲ್ಲಾ ನಂಬಿದ ಗ್ರಾಮಸ್ಥರು, ಆಕೆಗೆ ಕೊಡಬಾರದ ಚಿತ್ರಹಿಂಸೆಯನ್ನೆಲ್ಲಾ ಕೊಟ್ಟು, ಊರಲ್ಲೆಲ್ಲಾ ಅರೆಬೆತ್ತಲಾಗಿ ಓಡಾಡುವಂತೆ ಮಾಡಿದ್ದರು.
ದಶಕಗಳ ಬಳಿಕ ಮಹತೋ, ತಮ್ಮೂರು ಇರುವ ಬಿರ್ಬನ್ಸ್ ಪಂಚಾಯತಿಯ ಪುನಶ್ಚೇತನ ಕೇಂದ್ರದಲ್ಲಿ, ವಿವಿಧ ಊರುಗಳಿಂದ ಬಂದ 90ಕ್ಕೂ ಹೆಚ್ಚು ಮಹಿಳೆಯರನ್ನು ಮುನ್ನಡೆಸುತ್ತಾ ತಮ್ಮ ಜಿಲ್ಲೆಯುದ್ದಕ್ಕೂ ಯಾವುದೇ ಹೆಣ್ಣು ಮಗಳಿಗೆ ತಮಗಾದ ಅನುಭವ ಆಗದಂತೆ ನೋಡಿಕೊಂಡು, ಅವರಿಗೆ ಹೆಚ್ಚಿನ ವ್ಯಾಸಂಗ ಮಾಡಲು ನೆರವಾಗುವಂತೆ ಹೆಣ್ಣು ಹೆತ್ತವರಿಗೆ ಮನವರಿಕೆ ಮಾಡಿಕೊಡುತ್ತಾ ಬಂದಿದ್ದಾರೆ. ಮಾಟ ಮಂತ್ರದ ನೆವದಲ್ಲಿ ಬಲಿಯಾಗಲಿದ್ದ 60ಕ್ಕೂ ಹೆಚ್ಚು ಹೆಂಗಸರನ್ನು ಕಾಪಾಡಿರುವ ಮಹಾತೋಗೆ ’ಟೈಗ್ರೆಸ್’ ಎಂಬ ಜನಪ್ರಿಯ ಅಡ್ಡನಾಮವಿದೆ.