ಮುಂಬೈನ ದಾದರ್ ಹಿಂದೂ ಕಾಲೋನಿಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನಿವಾಸದ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಿ ಹಾನಿ ಮಾಡಿದ್ದಾರೆ.
ಕಿಟಕಿ ಗಾಜುಗಳು, ಸಿಸಿ ಟಿವಿ ಕ್ಯಾಮೆರಾಗಳು ಹೂ ಕುಂಡಗಳಿಗೆ ಹಾನಿಯಾಗಿದೆ. ಅಂಬೇಡ್ಕರ್ ನಿವಾಸ ರಾಜಗೃಹ ಉದ್ಯಾನವನದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಮಾತುಂಗ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಘಟನೆ ನಂತರ ಮನೆಗೆ ಭದ್ರತೆ ಒದಗಿಸಲಾಗಿದೆ.
3 ಅಂತಸ್ತಿನ ಅಂಬೇಡ್ಕರ್ ಅವರ ನಿವಾಸವನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಇಡಲಾಗಿದೆ. ಮನೆಯಲ್ಲಿ ಅಂಬೇಡ್ಕರ್ ಅವರ ಸೊಸೆ ಮತ್ತು ಮೊಮ್ಮಕ್ಕಳಾದ ಪ್ರಕಾಶ್ ಅಂಬೇಡ್ಕರ್, ಆನಂದರಾವ್, ಭೀಮರಾವ್ ವಾಸಿಸುತ್ತಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ದುಷ್ಕೃತ್ಯವೆಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಅಂಬೇಡ್ಕರ್ ಅವರ ಮನೆ ಪುಣ್ಯಕ್ಷೇತ್ರ ಇದ್ದಂತೆ. ಇಂತಹ ಸ್ಥಳದಲ್ಲಿ ದುಷ್ಕೃತ್ಯ ನಡೆಸಿರುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಗೃಹಸಚಿವ ಅನಿಲ್ ದೇಶಮುಖ್ ಅವರು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.