ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದ್ದು, ಗಡಿಯಲ್ಲಿ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.
ಇದೇ ವೇಳೆ ಆರ್ಥಿಕವಾಗಿಯೂ ತಿರುಗೇಟು ನೀಡಲು ಕ್ರಮ ಕೈಗೊಳ್ಳಲಾಗಿದೆ. ಚೀನಾ ವಸ್ತುಗಳಿಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಚೀನಾಗೆ ಬರೆ ಎಳೆಯಲು ಮುಂದಾಗಿದ್ದು ಚೀನಿ ಉತ್ಪನ್ನಗಳಿಗೆ ನಿರ್ಬಂಧ ಹೇರಿದೆ.
ಗೊಂಬೆ, ಪೀಠೋಪಕರಣ, ವಾಚ್, ಕಾಸ್ಮೆಟಿಕ್ಸ್ ಸೇರಿದಂತೆ ಸುಮಾರು ಮೂರು ಸಾವಿರ ಚೀನಿ ಉತ್ಪನ್ನಗಳಿಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ನಿರ್ಬಂಧ ಹೇರಿದೆ. ಭಾರತೀಯ ಯೋಧರನ್ನು ಹತ್ಯೆ ಮಾಡಿದ ಕಾರಣಕ್ಕೆ ಚೀನಾ ಸರಕುಗಳನ್ನು ಬಹಿಷ್ಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವ್ಯಾಪಾರಿಗಳ ಒಕ್ಕೂಟದ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.
ಕೊರೊನಾ ಸೋಂಕು ಮತ್ತು ಲಾಕ್ಡೌನ್ ಕಾರಣದಿಂದ ಚೀನಿ ವಸ್ತುಗಳ ಆಮದು ಶೇಕಡ 40 ರಷ್ಟು ಕುಸಿದಿದೆ. ಈಗ ಎಲ್ಲಾ ಚಿನ್ನಿ ಉತ್ಪನ್ನಗಳ ಆರ್ಡರ್ ಗಳನ್ನು ನಿಲ್ಲಿಸಲಾಗುವುದು ಎಂದು ಕೊಲ್ಕತ್ತಾ ಕಸ್ಟಮ್ಸ್ ಹೌಸ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಸುಜಿತ್ ಚಕ್ರವರ್ತಿ ಹೇಳಿದ್ದಾರೆ.