ಬುದ್ಧಿವಂತ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ನೂರಕ್ಕೆ ನೂರು ಅಂಕ ಪಡೆಯುವುದು ಸರ್ವೇ ಸಾಮಾನ್ಯ. ಇಲ್ಲೊಬ್ಬ ವಿದ್ಯಾರ್ಥಿ ಎಲ್ಲ ವಿಷಯಗಳಲ್ಲೂ ತಲಾ 35 ಅಂಕ ಗಳಿಸಿ ಗಮನ ಸೆಳೆದಿದ್ದಾನೆ.
ಮಹಾರಾಷ್ಟ್ರ ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್‌ಎಸ್‌ಸಿ-ಕ್ಲಾಸ್ 10) ಪರೀಕ್ಷೆಯಲ್ಲಿ ಬೀಡ್‌ನ ಮಜಲ್‌ಗಾವೊ ತಹಸಿಲ್‌ನಲ್ಲಿರುವ ರಾಮೇಶ್ವರ ವಿದ್ಯಾಲಯದ ಧನಂಜಯ್ ನಖಾಟೆ (14) ಮರಾಠಿ, ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ತಲಾ 35 ಅಂಕಗಳನ್ನು ಪಡೆದಿದ್ದಾರೆ.
ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಉತ್ತೀರ್ಣರಾಗಲು ಮೂವತ್ತೈದು ಕನಿಷ್ಠ ಅಂಕವಾಗಿದೆ. ಎರಡು ದಿನದ ಹಿಂದೆ ಬೋರ್ಡ್ ಫಲಿತಾಂಶ ಘೋಷಣೆಯಾಗಿತ್ತು.
ಧನಂಜಯ್ ಕೇವಲ 35 ಶೇಕಡಾ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದರೂ, ಅವನು ಮತ್ತಷ್ಟು ಓದಬೇಕೆಂದು ನಾನು ಬಯಸುತ್ತೇನೆ. ಅದಕ್ಕೆ ಅವನು ಒಪ್ಪಿದರೆ, 40 ಕಿ.ಮೀ ದೂರದಲ್ಲಿರುವ ಕಾಲೇಜಿನಲ್ಲಿ ಅವನ ಪ್ರವೇಶಕ್ಕಾಗಿ ಪ್ರಯತ್ನಿಸುತ್ತೇನೆ ಎಂದು ಆತನ ತಂದೆ ಹೇಳಿದ್ದಾರೆ.
ಫಲಿತಾಂಶವು ಆತನಿಗೆ ಆಶ್ಚರ್ಯವನ್ನುಂಟು ಮಾಡಿದೆ ಹಾಗೂ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಕ್ಕೆ ಸಂತೋಷಪಟ್ಟಿದ್ದಾನೆ. ಅಲ್ಲದೇ ಗ್ರಾಮಸ್ಥರು ಧನಂಜಯ್ ನನ್ನು ಸನ್ಮಾನಿಸಿದರು.