ಭಾರತದಲ್ಲಿ ತಂದೆಯೊಂದಿಗೆ ವಾಸವಿರುವ ಇಬ್ಬರು ಹೆಣ್ಣು ಮಕ್ಕಳ ಕಸ್ಟಡಿಯನ್ನ ಅಮೆರಿಕ ಮೂಲದ ತಾಯಿಗೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಅಮೆರಿಕದಲ್ಲಿ ಅತ್ಯುತ್ತಮ ಜೀವನ ನಡೆಸಿದ ಬಳಿಕವೂ ಇಬ್ಬರೂ ಹೆಣ್ಣು ಮಕ್ಕಳು ತಮ್ಮ ತಂದೆಯೊಂದಿಗೆ ಭಾರತದಲ್ಲೇ ವಾಸಿಸುವ ಇರಾದೆಯನ್ನ ಕೋರ್ಟ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಈ ಮಕ್ಕಳ ಕಸ್ಟಡಿ ತಂದೆಯ ಬಳಿಯೇ ಇರಲಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಹಾಗೂ ಮನೀಶ್ ಪಿತಾಲೆ ಹೇಳಿದ್ರು.
ಇಬ್ಬರೂ ಹೆಣ್ಣುಮಕ್ಕಳು ಅಪ್ರಾಪ್ತರಾಗಿರೋದ್ರಿಂದ ಈ ಮಕ್ಕಳ ನಿರ್ಧಾರವನ್ನ ಸಂಪೂರ್ಣವಾಗಿ ಮಾನ್ಯ ಎಂದು ಹೇಳಲಾಗದಿದ್ದರೂ ಸಹ ಇಬ್ಬರೂ ಮೆಜಾರಿಟಿಗೆ ಬರಲು ಕೆಲವೇ ವರ್ಷ ಬಾಕಿ ಇರೋದ್ರಿಂದ ಈ ನಿರ್ಧಾರ ಪ್ರಸ್ತುತವಾಗಿದೆ. ದೊಡ್ಡ ಮಗಳು 18 ವರ್ಷದ ಸಮೀಪದಲ್ಲಿದ್ದರೆ ಇನ್ನೊಬ್ಬಳು 15 ವರ್ಷಕ್ಕಿಂತ ಮೇಲ್ಪಟ್ಟಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಅಮೆರಿಕ ಮೂಲದ ಮಹಿಳೆ ತಮ್ಮ ಮಕ್ಕಳ ಕಸ್ಟಡಿಗಾಗಿ ಕಳೆದ ವರ್ಷ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಹಿಳೆಯ ಪತಿ 2019ರ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ 2 ವಾರಗಳ ಪ್ರವಾಸಕ್ಕೆಂದು ಬಂದಿದ್ದರು. ಬಳಿಕ ಪತಿ ಅಮೆರಿಕಕ್ಕೆ ವಾಪಸ್ಸಾಗಲು ನಿರಾಕರಿಸಿದ್ದರು.
ಅಮೆರಿಕ ನ್ಯಾಯಾಲವು ಬಾಲಕಿಯರ ಕಸ್ಟಡಿಯನ್ನ ತನಗೇ ನೀಡಿದೆ. ಆದರೆ ಪತಿಗೆ ಕಾನೂನಿನ ಮೇಲೆ ಗೌರವವಿಲ್ಲ. ಆದ್ದರಿಂದ ಹೆಣ್ಣು ಮಕ್ಕಳನ್ನ ತನಗೆ ನೀಡಿ ಎಂದು ಮಹಿಳೆ ಪರ ವಕೀಲ ವಾದ ಮಂಡಿಸಿದ್ದರು.
ಆದರೆ ಮಹಿಳಾ ಪರ ವಕೀಲರ ವಾದವನ್ನ ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಇಬ್ಬರೂ ಹೆಣ್ಣು ಮಕ್ಕಳು ಭಾರತದಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ ಇವರಿಬ್ಬರೂ ತಂದೆಯೊಂದಿಗೆ ಇರುವ ಇರಾದೆಯನ್ನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ತಂದೆಯ ಆರ್ಥಿಕ ಸ್ಥಿತಿ ಕೂಡ ಒಳ್ಳೆಯ ರೀತಿಯಲ್ಲಿ ಇರೋದ್ರಿಂದ ಮಕ್ಕಳ ಕಸ್ಟಡಿಯನ್ನ ನಿಮಗೆ ನೀಡಲಾಗೋದಿಲ್ಲ ಎಂದು ಹೇಳಿದೆ.