ಮೀನುಗಾರರ ಬದುಕು ಎಂದರೆ ನೀರ ಮೇಲಿನ ಗುಳ್ಳೆ ಇದ್ದಂತೆ. ಜೀವನಕ್ಕಾಗಿ ಅವರು ನಡೆಸುವ ಸಾಹಸ ಎಂಥವರನ್ನೂ ಬೆರಗು ಮಾಡುತ್ತದೆ. ಅದೂ ಮಳೆಗಾಲ, ಬಿರುಗಾಳಿ ಸಂದರ್ಭದಲ್ಲಿ ಮೀನುಗಾರರು ನಡೆಸುವ ಸಾಹಸಕ್ಕೆ ಎಂಥ ಪ್ರಶಸ್ತಿ ನೀಡಿದರೂ ಕಡಿಮೆಯೇ.
ಐವರು ಮೀನುಗಾರರು ನಾಡ ದೋಣಿಯಲ್ಲಿ ಮೀನು ಹಿಡಿಯಲು ಹೋಗಿ ಅಲೆಗಳ ಜತೆ ಹೋರಾಟ ಮಾಡುವ ವಿಡಿಯೋವನ್ನು ಖ್ಯಾತ ಮರಳು ಶಿಲ್ಪಕಾರ ಸುದರ್ಶನ್ ಪಟ್ನಾಯಕ್ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋವನ್ನು 7500 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಹಲವರು ರೀ ಟ್ವೀಟ್ ಮಾಡಿದ್ದಾರೆ.
ಅಬ್ಬರದ ಅಲೆಗಳಲ್ಲಿ ದೋಣಿ ಇನ್ನೇನು ಮುಳುಗೇ ಹೋದಂತೆ ಕಾಣುತ್ತದೆ. ಆದರೆ, ಮೀನುಗಾರರು ಮುಳುಗದೇ ಮತ್ತೆ ಮುಂದೆ ಹೋಗುತ್ತಾರೆ. ಹುಟ್ಟು ಹಾಕಿ, ಹಾಕಿ ಒಂದೊಂದೇ ಅಲೆಗಳನ್ನು ದಾಟುತ್ತಾರೆ. “ಜೀವನದ ಹೋರಾಟವನ್ನು ಇವರಿಂದ ಕಲಿಯಬೇಕು” ಎಂದು ಪಟ್ನಾಯಕ್ ಕ್ಯಾಪ್ಶನ್ ನೀಡಿದ್ದಾರೆ.