ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳುನಾಡಿನ ಮೇಲೆ ಹೆಚ್ಚಿನ ಗಮನಹರಿಸಿರುವ ಬಿಜೆಪಿ, ಅಲ್ಲಿನ ಮಾಜಿ ಮುಖ್ಯಮಂತ್ರಿ ಎಂಜಿಆರ್ ಅವರ ಫೋಟೋವನ್ನು ಬಳಸಿಕೊಂಡಿರುವುದು ಮಿತ್ರ ಪಕ್ಷ ಎಡಿಎಂಕೆಯ ಕಣ್ಣು ಕೆಂಪಾಗಿಸಿದೆ.
ಎಐಎಡಿಎಂಕೆ ಸಂಸ್ಥಾಪಕ ಮತ್ತು ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರ ಫೋಟೋವನ್ನು ಬಿಜೆಪಿ ತನ್ನ “ವೆಲ್ ಯಾತ್ರೆ” ಪ್ರಚಾರಕ್ಕಾಗಿ ವಿಡಿಯೊದಲ್ಲಿ ಬಳಸಿದ್ದಾರೆ.
“ಅವರು ತಮ್ಮದೇ ಆದ ನಾಯಕನನ್ನು ಹೊಂದಿಲ್ಲವೇ? ಅವರು ನಮ್ಮ ನಾಯಕನ ಚಿತ್ರವನ್ನು ಏಕೆ ಬಳಸುತ್ತಾರೆ? ಎಂಜಿಆರ್ ನಮ್ಮ ನಾಯಕ. ಎಂಜಿಆರ್ ಚಿತ್ರವನ್ನು ಬಳಸುವ ನೈತಿಕ ಹಕ್ಕನ್ನು ಯಾವುದೇ ಪಕ್ಷದವರು ಹೊಂದಿಲ್ಲ” ಎಂದು ಎಐಎಡಿಎಂಕೆ ಸರ್ಕಾರದ ಹಿರಿಯ ಸಚಿವ ಡಿ. ಜಯಕುಮಾರ್ ಹೇಳಿದ್ದಾರೆ.
ಕಳೆದ ವಾರ ರಾಜ್ಯ ಬಿಜೆಪಿ ಘಟಕದ ಸಾಂಸ್ಕೃತಿಕ ವಿಭಾಗ ಬಿಡುಗಡೆ ಮಾಡಿದ ಮೂರು ನಿಮಿಷಗಳ ವಿಡಿಯೋದಲ್ಲಿ ಎಂಜಿಆರ್ ಅವರ ಛಾಯಾಚಿತ್ರವೊಂದನ್ನು ತೋರಿಸಲಾಗಿದೆ.
ರಾಜಕೀಯ ರ್ಯಾಲಿಗಳು ಮತ್ತು ಪಕ್ಷದ ಸಾಹಿತ್ಯದಲ್ಲಿ ಎಂಜಿಆರ್ ಅನ್ನು ಬಳಸಲಾಗುತ್ತಿದೆ ಎಂಬ ಅಸಮಾಧಾನ ಎಐಎಡಿಎಂಕೆಯದ್ದಾಗಿದೆ.
ಆ ರಾಜ್ಯದಲ್ಲಿ ಹಿಂದೂ ಮತಗಳನ್ನು ಕ್ರೋಡೀಕರಿಸುವ ಪ್ರಯತ್ನವಾಗಿ ಈ ರೀತಿ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದು, ವಿಶೇಷವಾಗಿ ಹಿಂದುಳಿದ ಸಮುದಾಯವನ್ನು ಕೇಂದ್ರೀಕರಿಸಲಾಗುತ್ತಿದೆ.
ನವೆಂಬರ್ 6ರಿಂದ ರಾಜ್ಯ ಬಿಜೆಪಿಯ ಎಲ್. ಮುರುಗನ್ ಅವರು ರಾಜ್ಯದ ಪ್ರಮುಖ ಮುರುಗ ದೇವಾಲಯಗಳಿಗೆ ಭೇಟಿ ನೀಡುವ ಒಂದು ತಿಂಗಳ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಈರಾಜ್ಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಬಿಜೆಪಿಯ ಹಿರಿಯ ಮುಖಂಡರೊಬ್ಬರು ಎಂಜಿಆರ್ ಅವರ ಛಾಯಾಚಿತ್ರವನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ, ಎಂಜಿಆರ್ ಅವರದ್ದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿರಲಾಗದ ಜೀವನ ಎಂದು ಹೇಳಿದ್ದಾರೆ.