ಸಂಪೂರ್ಣ ದೇಶವೇ ಕೊರೊನಾ ಎರಡನೇ ಅಲೆಗೆ ತತ್ತರಿಸಿ ಹೋಗಿದ್ದು ಆಕ್ಸಿಜನ್ ಸಿಲಿಂಡರ್ ಕೊರತೆ, ಬೆಡ್ ಅಭಾವದಿಂದಾಗಿ ಕಂಗೆಟ್ಟಿದೆ. ಮಧ್ಯ ಪ್ರದೇಶದಲ್ಲೂ ಸಹ ಬಹುತೇಕ ಇಂತದ್ದೇ ಪರಿಸ್ಥಿತಿ ಇದ್ದು ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನ ಕೈಗೊಂಡಿದ್ದಾರೆ.
ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ಜೊತೆಗೆ ಬಿಜೆಪಿ ತನ್ನ ಪಕ್ಷದ ಪರವಾಗಿ ಕೂಡ ಕೋವಿಡ್ ವಿರುದ್ಧದ ಹೋರಾಟಕ್ಕೆ ಅಣಿಯಾಗಿದೆ. ಕೋವಿಡ್ ರೋಗಿಗಳಿಗಾಗಿ ಮಧ್ಯ ಪ್ರದೇಶ ಬಿಜೆಪಿ ಐಸೋಲೇಷನ್ ಕೇಂದ್ರಗಳನ್ನ ನಿರ್ಮಾಣ ಮಾಡುತ್ತಿದೆ.
ಮೂಲಗಳ ಪ್ರಕಾರ ಭೋಪಾಲ್ನ ಮೋತಿಲಾಲ್ ನೆಹರೂ ಸ್ಟೇಡಿಯಂನಲ್ಲಿ ಬಿಜೆಪಿ ಬರೋಬ್ಬರಿ 1000 ಬೆಡ್ಗಳ ಐಸೋಲೇಷನ್ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ಐಸೋಲೇಷನ್ ಕೇಂದ್ರದಲ್ಲಿ ಗಂಭೀರ ಲಕ್ಷಣಗಳನ್ನ ಹೊಂದಿರುವ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಇಡಲಾಗಿದೆ.
ನರ್ಸಿಂಗ್ ಸಿಬ್ಬಂದಿ ಮಾತ್ರವಲ್ಲದೇ ವೈದ್ಯರೂ ಸಹ ಇಲ್ಲಿ 24 ಗಂಟೆ ಇರಲಿದ್ದಾರೆ. ಅಂದಹಾಗೆ ಇಲ್ಲಿ ಸಂಪೂರ್ಣ ಕೋವಿಡ್ ಚಿಕಿತ್ಸೆ ಉಚಿತವಾಗಿ ಸಿಗಲಿದೆ.
ಇದರ ಜೊತೆಯಲ್ಲಿ ಈ ಐಸೋಲೇಷನ್ ಸೆಂಟರ್ನಲ್ಲಿ ಅಡ್ಮಿಟ್ ಆಗುವ ರೋಗಿಗಳು ನಿತ್ಯ ಮೃತ್ಯುಂಜಯ ಮಂತ್ರ ಹಾಗೂ ಗಾಯತ್ರಿ ಮಂತ್ರಗಳನ್ನ ಕೇಳುವಂತೆ ವ್ಯವಸ್ಥೆ ಮಾಡಲಾಗಿದೆಯಂತೆ.
ಇದರಿಂದ ರೋಗಿಗಳಲ್ಲಿ ಸಕಾರಾತ್ಮಕ ಭಾವನೆ ಹುಟ್ಟಲಿದೆ ಅನ್ನೋದು ಬಿಜೆಪಿಗರ ನಂಬಿಕೆಯಾಗಿದೆ. ಇದು ಮಾತ್ರವಲ್ಲದೇ ಕೋವಿಡ್ ರೋಗಿಗಳಿಗೆ ಬೆಳಗ್ಗೆ ಹಾಗೂ ಸಂಜೆ ರಾಮಾಯಣ ಧಾರಾವಾಹಿಯನ್ನ ವೀಕ್ಷಿಸೋಕೂ ಅವಕಾಶ ಕಲ್ಪಿಸಲಾಗಿದೆ.