ಕೋವಿಡ್ ಲಸಿಕೆಗಳನ್ನು ವಯೋಮಾನದ ಆಧಾರದಲ್ಲಿ ಆದ್ಯತೆಯ ಮೇಲೆ ನೀಡುತ್ತಿರುವ ನಡುವೆಯೇ ಉತ್ತರಾಖಂಡದ ಬಿಜೆಪಿ ಶಾಸಕರೊಬ್ಬರ ಪುತ್ರ ಈ ವ್ಯವಸ್ಥೆಯನ್ನೇ ಮೀರಿ ನಿಲ್ಲುವ ಮೂಲಕ, ಇಂಥ ಸೂಕ್ಷ್ಮ ವಿಚಾರದಲ್ಲೂ ರಾಜಕಾರಣಿಗಳ ಮೇಲಾಟವೇ ಎಂಬ ದೊಡ್ಡ ಚರ್ಚೆ ಆರಂಭಗೊಂಡಿದೆ.
18-45ರ ವಯೋಮಾನದ ಮಂದಿಗೆ ಕೋವಿಡ್ ಲಸಿಕೆ ಕಾರ್ಯಕ್ರಮ ಇಂದಿನಿಂದ ಆರಂಭಗೊಳ್ಳಲಿದೆ. ಆದರೂ ಸಹ ಕಾನ್ಪುರದ ಬಿಜೆಪಿ ಶಾಸಕ ಕುಂವರ್ ಪ್ರಣವ್ ಸಿಂಗ್‌ರ ಪುತ್ರ, 25 ವರ್ಷದ ದಿವ್ಯ ಪ್ರತಾಪ್ ಸಿಂಗ್ ಈ ಲಸಿಕೆಯನ್ನು ಮೇ 5 ರಂದೇ ಹಾಕಿಸಿಕೊಂಡಿದ್ದಾರೆ. ಈತ ಲಸಿಕೆ ಪಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಭಾರೀ ವಿವಾದ ಸೃಷ್ಟಿಯಾಗಿದೆ.
ಇಲ್ಲಿನ ಡೂನ್ ಆಸ್ಪತ್ರೆಗೆ ಆಗಮಿಸಿದ್ದ ಶಾಸಕರ ಕುಟುಂಬವು ಲಸಿಕೆಯನ್ನು ಶೀಘ್ರವೇ ಕೊಡಬೇಕೆಂದು ಆಸ್ಪತ್ರೆ ಸಿಬ್ಬಂದಿಗೆ ಒತ್ತಡ ಹಾಕಿದ್ದರಿಂದ ಹೀಗೆ ಆಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಬಹುತೇಕ ಮಂದಿಗೆ ಕೋವಿಶೀಲ್ಡ್ ಕೊಡುತ್ತಿರುವ ನಡುವೆಯೇ ಈತನಿಗೆ ಕೋವ್ಯಾಕ್ಸಿನ್ ಲಸಿಕೆಯನ್ನೇ ನೀಡಲಾಗಿದೆ.
ಪ್ರಮುಖ ಪ್ರವಾಸಿ ತಾಣ ರಾಜಸ್ತಾನದ ಮೌಂಟ್ ಅಬು
ತನ್ನ ಪುತ್ರ ವೈರಸ್ ವಿರುದ್ಧ ಹೋರಾಟದಲ್ಲಿ ಮುಂಚೂಣಿ ಕಾರ್ಯಕರ್ತನಾಗಿದ್ದ ಕಾರಣ ಆತನಿಗೆ ಆದ್ಯತೆ ಮೇಲೆ ಲಸಿಕೆ ನೀಡಲಾಗಿದೆ ಎಂದು ಶಾಸಕರು ಸಮಜಾಯಿಷಿ ಕೊಟ್ಟುಕೊಂಡಿದ್ದಾರೆ.
ಕುಂವರ್ ಪ್ರಣವ್ ಸಿಂಗ್ ಈ ಹಿಂದೆ ಹಿಂದಿ ಹಾಡೊಂದಕ್ಕೆ ಕೈಯಲ್ಲಿ ಗನ್‌ಗಳನ್ನು ಹಿಡಿದು ಸ್ಟೆಪ್ ಹಾಕುತ್ತಿದ್ದ ವಿಡಿಯೋವೊಂದನ್ನು ಅಪ್ಲೋಡ್ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.