
ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಮುಂಬೈ ಕುರಿತಾಗಿ ನೀಡಿದ ಹೇಳಿಕೆಗೆ ಮಹಾರಾಷ್ಟ್ರದ ಕೆಲ ಸಚಿವರು ಆಕ್ಷೇಪಿಸಿದ್ದು, ಅನೇಕರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಕಂಗನಾಗೆ ವೈಪ್ಲಸ್ ಭದ್ರತೆ ಒದಗಿಸಲಾಗಿದೆ.
ಅವರಿಗೆ ಭದ್ರತೆ ನೀಡುವ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರದ ಕ್ರಮವನ್ನು ಬಿಜೆಪಿ ಹಿರಿಯ ಮುಖಂಡ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬೆಂಬಲಿಸಿದ್ದಾರೆ. ಆದರೆ, ಕಂಗನಾ ರನೌತ್ ಅವರ ಹೇಳಿಕೆಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿಕೆಯನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದು ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ.
ಕಂಗನಾ ತಪ್ಪು ಹೇಳಿಕೆ ನೀಡಿದ್ದಾರೆ. ಆದರೆ ಅವರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹಾಗಾಗಿ ಭದ್ರತೆ ಒದಗಿಸಲಾಗಿದೆ. ಯಾರಾದರೂ ಏನಾದರೂ ಹೇಳಿದರೆ ಆಕ್ಷೇಪಿಸಬಹುದು. ಅವರ ಮೇಲೆ ದಾಳಿಯಾಗದಂತೆ ಕಾನೂನಿನಡಿ ಭದ್ರತೆ ಒದಗಿಸಲಾಗಿದೆ. ಯಾರೊಬ್ಬರ ಅಭಿಪ್ರಾಯ ಇಷ್ಟವಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು. ಎಲ್ಲರನ್ನೂ ರಕ್ಷಿಸುವುದು ಸಂವಿಧಾನದಡಿ ಪ್ರಮಾಣವಚನ ಸ್ವೀಕರಿಸಿದವರ ಜವಾಬ್ದಾರಿಯಾಗಿದ್ದು ಅದನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶಮುಖ್ ಅವರು, ಕಂಗನಾಗೆ ಭದ್ರತೆ ಒದಗಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಕಂಗನಾಗೆ ಭದ್ರತೆ ನೀಡಿ ಮುಂಬೈ ಮತ್ತು ಮಹಾರಾಷ್ಟ್ರಕ್ಕೆ ಅವಮಾನಿಸಿದೆ ಎಂದು ಕಿಡಿಕಾರಿದ್ದಾರೆ.