ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಅತಿಯಾದ ಹಿನ್ನೆಲೆ ಉತ್ತರ ಹಾಗೂ ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆಯು ಆಯಾ ಪ್ರದೇಶಗಳಲ್ಲಿ ಕೋಳಿ ಮಾರಾಟವನ್ನ ನಿಷೇಧಿಸಿವೆ.
ಮೊಟ್ಟೆ ಹಾಗೂ ಕೋಳಿ ಮಾಂಸದ ಭಕ್ಷ್ಯ ತಯಾರಿಸುವ ರೆಸ್ಟಾರೆಂಟ್ಗಳಿಗೆ ಎಚ್ಚರಿಕೆ ನೀಡಲಾಗಿದೆ.
ಎನ್ಡಿಎಂಸಿ ವ್ಯಾಪ್ತಿಯ ಪ್ರದೇಶಗಳಲ್ಲಿನ ಎಲ್ಲಾ ಮಾಂಸ ಹಾಗೂ ಮಾಂಸ ಸಂಸ್ಕರಣಾ ಘಟಕಗಳಿಗೆ ಮುಂದಿನ ಆದೇಶದವರೆಗೂ ಕೋಳಿ ಮಾಂಸ ಮಾರಾಟ ಮಾಡಬೇಡಿ ಎಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಆದೇಶ ನೀಡಿದೆ.
ಇನ್ನು ಎಸ್ಡಿಎಂಸಿ ವ್ಯಾಪ್ತಿಯ ಪ್ರದೇಶದಲ್ಲಿ ಹಕ್ಕಿ ಜ್ವರ ಹೆಚ್ಚಾಗಿರುವ ಕಾರಣ, ಕೋಳಿ ಆಮದು ಹಾಗೂ ರಫ್ತನ್ನ ಎಲ್ಲಾ ಮಾಂಸ ಸಂಸ್ಕರಣಾ ಘಟಕಗಳಲ್ಲಿ ನಿಷೇಧಿಸಲಾಗಿದೆ. ಮುಂದಿನ ಆದೇಶದವರೆಗೆ ಕೋಳಿ ಅಥವಾ ಕೋಳಿ ಮಾಂಸಗಳನ್ನ ಪ್ಯಾಕೆಜಿಂಗ್ ಮಾಡದಂತೆ ಹಾಗೂ ರೆಸ್ಟಾರೆಂಟ್ಗಳಲ್ಲಿ ಕೋಳಿ ಹಾಗೂ ಮೊಟ್ಟೆಯ ಪದಾರ್ಥಗಳನ್ನ ಬಡಿಸದಂತೆ ಸೂಚನೆ ನೀಡಲಾಗಿದೆ.
ಆದೇಶವನ್ನ ಧಿಕ್ಕರಿಸಿದ ಅಂಗಡಿಗಳ ವ್ಯಾಪಾರ ಪರವಾನಿಗಿಯನ್ನ ಅಮಾನತುಗೊಳಿಸಲಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ.