ದೇಶದ ಅನೇಕ ರಾಜ್ಯಗಳಲ್ಲಿ ಹಕ್ಕಿ ಜ್ವರದ ಭಯ ಹೆಚ್ಚಾಗಿದೆ.
ಮಧ್ಯಪ್ರದೇಶ, ಹರಿಯಾಣ, ಗುಜರಾತ್ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಇದು ಚಿಕನ್ ಪ್ರಿಯರಲ್ಲಿ ಭಯ ಹುಟ್ಟಿಸಿದೆ. ಚಿಕನ್, ಮೊಟ್ಟೆ ತಿನ್ನೋದು ಎಷ್ಟು ಸೇಫ್ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಈ ಚರ್ಚೆ ಮಧ್ಯೆ ಕೇಂದ್ರ ಕೋಳಿ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಡಾ.ಕಮ್ನಾ ಎಚ್ಚರದಿಂದಿರುವಂತೆ ಸಲಹೆ ನೀಡಿದ್ದಾರೆ. ಮೊಟ್ಟೆ, ಚಿಕನ್ ತಿನ್ನುವ ಮೊದಲು ಕೆಲವೊಂದು ಎಚ್ಚರಿಕೆ ವಹಿಸಬೇಕೆಂದು ಅವರು ಹೇಳಿದ್ದಾರೆ. ಮೊಟ್ಟೆ ಹಾಗೂ ಚಿಕನ್ ಪೂರ್ತಿಯಾಗಿ ಬೆಂದಿರುವಂತೆ ನೋಡಿಕೊಳ್ಳಿ ಎಂದವರು ಹೇಳಿದ್ದಾರೆ. ಚೆನ್ನಾಗಿ ಬೇಯಿಸಿದ ಮಾಂಸದಿಂದ ಯಾವುದೇ ತೊಂದರೆಯಿಲ್ಲ. ಆದ್ರೆ ಹೊರಗಿನಿಂದ ಮಾಂಸ ತಂದಿದ್ದರೆ ಪದೇ ಪದೇ ಕೈ ತೊಳೆಯಬೇಕಾಗುತ್ತದೆ.
ಹಕ್ಕಿ ಜ್ವರ ಬೇಗ ಮನುಷ್ಯರ ದೇಹ ಸೇರುವ ಅಪಾಯವಿದೆ. ಕೋಳಿ ಫಾರ್ಮ್ ನಲ್ಲಿ ಕೆಲಸ ಮಾಡುವವರು ಹಾಗೂ ಹೊಲದಲ್ಲಿ ಕೆಲಸ ಮಾಡುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ಅವರು ತಿಳಿಸಿದ್ದಾರೆ. ಶೀತ, ಕೆಮ್ಮು, ಜ್ವರ ಕೂಡ ಕೆಲವೊಮ್ಮೆ ಹಕ್ಕಿ ಜ್ವರಕ್ಕೆ ಕಾರಣವಾಗುತ್ತದೆ. ಹಾಗಾಗಿ ಆಗಾಗ ಕೈ ತೊಳೆಯುವುದು ಬಹಳ ಮುಖ್ಯ. ಹಸಿ ಮೊಟ್ಟೆ ಸೇವನೆ ಸದ್ಯ ಬೇಡವೆಂದು ಅವರು ತಿಳಿಸಿದ್ದಾರೆ.