ಸಾಮಾಜಿಕ ಜಾಲತಾಣದಲ್ಲಿ ಒಂಬತ್ತು ಲಕ್ಷಕ್ಕೂ ಮಿಕ್ಕಿ ಫಾಲೋಯರ್‌ಗಳನ್ನು ಹೊಂದಿದ ಸ್ಟಂಟ್ ಬೈಕರ್ ಒಬ್ಬ ಈಗ ಕೊಲೆ ಪ್ರಕರಣದ ಅರೋಪಿಯಾಗಿ ಜೈಲು ಸೇರಿರುವ ಪ್ರಸಂಗ ನೋಯ್ಡಾದಲ್ಲಿ ನಡೆದಿದೆ.
ಬೈಕ್ ಸ್ಟಂಟ್ ಮೂಲಕ ಯೂಟ್ಯೂಬ್ ಚಾನೆಲ್‌ನಲ್ಲಿ ಒಂಬತ್ತು ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಪ್ರಭಾವಿ ನಿಜಾಮುಲ್ ಖಾನ್ ತನ್ನ ಗೆಳತಿಯ ಸಹೋದರನನ್ನೇ ಕೊಂದ ಆರೋಪದ ಮೇಲೆ ಜೈಲು ಪಾಲಾಗಿದ್ದಾನೆ.
26 ವರ್ಷದ ಕಮಲ್ ಶರ್ಮಾ ಹತ್ಯೆಯಾದವರು. ತನ್ನ ಸಹೋದರಿಯೊಂದಿಗೆ ನಿಜಾಮುಲ್ ಖಾನ್ ಸಲಿಗೆಯಿಂದ ವರ್ತಿಸುವುದಕ್ಕೆ ಕಮಲ್ ಅಸಮಾಧಾನಗೊಂಡಿದ್ದರು. ಒಮ್ಮೆ ಗಲಾಟೆಯೂ ನಡೆದಿತ್ತೆನ್ನಲಾಗಿದೆ.
ಅಕ್ಟೋಬರ್ 28 ರಂದು ಕಮಲ್ ಶರ್ಮಾ ನೋಯ್ಡಾದ ಇಸ್ಕಾನ್ ದೇವಾಲಯದ ಬಳಿ ಸಂಚರಿಸುವಾಗ ಸ್ವಲ್ಪ ಸಮಯದವರೆಗೆ ಅವನನ್ನು ಹಿಂಬಾಲಿಸಿದ ನಿಜಾಮುಲ್ ಖಾನ್, ಹಿಂಭಾಗದಿಂದ ಗುಂಡು ಹಾರಿಸಿದ್ದಾನೆ. ಕಮಲ್ ಆ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರು. ಇದು ಆರಂಭದಲ್ಲಿ ರಸ್ತೆಯಲ್ಲಿ ನಡೆದ ಜಗಳ ಎಂದು ಶಂಕಿಸಲಾಗಿತ್ತು.
ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಗುಂಡು ತಾಗಿರುವುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದರು. ಶವಪರೀಕ್ಷೆಯಲ್ಲಿ ಗುಂಡು ಪತ್ತೆಯಾಗಿದ್ದು, ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿಜಾಮುಲ್ ಖಾನ್‌ಗೆ ಸಹಾಯ ಮಾಡಿದ ಇಬ್ಬರನ್ನೂ ಸಹ ಬಂಧಿಸಲಾಗಿದೆ.