ಒಳ್ಳೆ ಕ್ರೈಂ ಥ್ರಿಲ್ಲರ್ ಚಿತ್ರದ ಕಥೆಯಂತೆ ನಡೆದ ಘಟನೆಯೊಂದರಲ್ಲಿ, ’ಕೊಲೆಯಾದ ವ್ಯಕ್ತಿ’ ಜೀವಂತ ಸಿಕ್ಕ ಬಳಿಕ ಆಪಾದಿತರನ್ನು ಬಿಡುಗಡೆ ಮಾಡಿದ ಘಟನೆ ಬಿಹಾರದ ಛಪ್ರಾದಲ್ಲಿ ಜರುಗಿದೆ.
ಮೇ 2019ರಲ್ಲಿ ನಡೆದ ಘಟನೆಯಲ್ಲಿ: ಇಲ್ಲಿನ ಕಾಕರ್ಹಾತ್ ಗ್ರಾಮದ ಸ್ವೀಟಿ ಹೆಸರಿನ ಮಹಿಳೆಯೊಬ್ಬರು ಪಕ್ಕದ ಬಜಿತ್ಪುರ ಗ್ರಾಮದಲ್ಲಿರುವ ತಮ್ಮ ಹೆತ್ತವರ ಮನೆಗೆ ಹೋಗುವುದಾಗಿ ಹೇಳಿದ್ದಾರೆ. ಆದರೆ ಸ್ವೀಟಿ ಹಾಗೂ ಅವರ ಏಳು ವರ್ಷದ ಮಗ ಇಬ್ಬರೂ ಸಹ ಬಜಿತ್ಪುರಕ್ಕೆ ಹೋದವರು ಅಲ್ಲಿಗೆ ತಲುಪಿಯೇ ಇಲ್ಲ.
ಇದಾದ ಎರಡು ದಿನಗಳ ಬಳಿಕ ಇಲ್ಲಿನ ಹಕ್ಮಾ ಗ್ರಾಮದ ಬಳಿ ಇರುವ ದಬ್ರಾ ನದಿ ತೀರದಲ್ಲಿ ಮಹಿಳೆಯೊಬ್ಬರ ಶವ ಸಿಕ್ಕಿದೆ. ಸ್ವೀಟಿ ತಂದೆಯನ್ನು ಕರೆಯಿಸಿ ಶವದ ಗುರುತು ಪತ್ತೆ ಮಾಡಲು ನೋಡಿದ ಪೊಲೀಸರಿಗೆ, ಆಕೆ ಸ್ವೀಟಿ ಎಂದು ಮಗಳ ಕಾಲ ಗೆಜ್ಜೆಯ ಅಂದಾಜಿನ ಮೇಲೆ ಹೇಳಿದ್ದಾರೆ. ಜೊತೆಗೆ ಆಕೆಯ ಕೊಲೆಗೆ ತನ್ನ ಬೀಗರ ಮನೆಯವರೇ ಕಾರಣ ಎಂದು ಆಪಾದನೆ ಮಾಡಿದ್ದಾರೆ ಸ್ವೀಟಿ ತಂದೆ.
ಈ ಆಪಾದನೆಗಳ ಮೇಲೆ ತನಿಖಾಧಿಕಾರಿ ಶಿವ್ನಾಥ್ ರಾಮ್ ಒಬ್ಬ ಮಹಿಳೆ ಸೇರಿದಂತೆ ಇಬ್ಬರನ್ನು, ಒಬ್ಬ ಮಹಿಳೆಯನ್ನೂ ಸೇರಿ, ಬಂಧಿಸಿದ್ದಾರೆ.
ಆದರೆ ತನಿಖಾಧಿಕಾರಿಯಾಗಿ ಎಸ್ಡಿಪಿಓ ಇಂದ್ರಜೀತ್ ಭಾಯ್ಟಾ ಚಾರ್ಜ್ ತೆಗೆದುಕೊಂಡ ಬಳಿಕ ಕಥೆಗೆ ಬೇರೆ ಟ್ವಿಸ್ಟ್ ಸಿಕ್ಕಿದ. ಸ್ವೀಟಿಯದ್ದು ಎಂದು ಪತ್ತೆ ಮಾಡಲಾದ ಶವ ಬೇರೊಬ್ಬರದ್ದಾಗಿದ್ದು, ಆಕೆಯ ಜೊತೆಯಲ್ಲಿ ಹೊರಟಿದ್ದ ಮಗನ ಸುಳಿವೇ ಇಲ್ಲದೇ ಇರುವ ಕಾರಣ ತನಿಖೆ ಬೇರೆ ದಿಕ್ಕಿನಲ್ಲಿ ಸಾಗಿದೆ.
ಕಾಲ ಗೆಜ್ಜೆಗಳನ್ನೇ ಆಧಾರವಾಗಿ ಇಟ್ಟುಕೊಂಡು ವ್ಯಕ್ತಿಯ ಗುರುತು ಸ್ಥಾಪಿಸುವುದು ಒಪ್ಪಿತವಲ್ಲ ಎಂದ ನಿರ್ಣಯಕ್ಕೆ ಬಂದ ತನಿಖಾ ತಂಡ, ಹೊಸ ತನಿಖಾಧಿಕಾರಿ ಎಸ್ಎಚ್ಓ ವಿಕಾಸ್ ಕುಮಾರ್ ನೇತೃತ್ವದಲ್ಲಿ ಪ್ರಕರಣದ ಆಳಾಂತರಗಳನ್ನು ಇನ್ನಷ್ಟು ಕೆದಕಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ವೀಟಿಯ ಇಹಪರಗಳನ್ನು ಜಾಲಾಡಿದ ಪೊಲೀಸರು ಆಕೆ ಮುಂಬೈಗೆ ಹೋಗಿರುವುದಾಗಿ ತಿಳಿದುಕೊಂಡಿದ್ದಾರೆ. ಬಳಿಕ ಆಕೆ ಪವನ್ ಎಕ್ಸ್ಪ್ರೆಸ್ ರೈಲಿನ ಮೂಲಕ ಮುಜಫ್ಫರ್ಪುರಕ್ಕೆ ಮರಳುವ ವಿಚಾರ ಗೊತ್ತಾಗಿದೆ.
ಕಳೆದ ಶುಕ್ರವಾರದಂದು ಸ್ವೀಟಿ ಹಾಗೂ ಆಕೆಯ ಪುತ್ರನನ್ನು ಕರೆದುಕೊಂಡು ಬಂದು ನ್ಯಾಯಾಲಯದ ಮುಂದೆ ಹಾಜರು ಮಾಡಿದ ಪೊಲೀಸರು, ಬಂಧಿಸಲಾಗಿದ್ದ ಆಕೆಯ ಗಂಡನ ಮನೆಯವನ್ನು ಬಿಡುಗಡೆ ಮಾಡಿಸಿದ್ದಾರೆ. ಈ ಮೂಲಕ ಇವರಿಬ್ಬರ ಒಂದೂವರೆ ವರ್ಷದ ಜೈಲು ವಾಸಕ್ಕೆ ತೆರೆ ಬಿದ್ದಿದೆ.
ಮನ್ಬೋದ್ ಕುಮಾರ್ ಎಂಬ ಮಾನಸಿಕ ಅಸ್ವಸ್ಥನೊಂದಿಗೆ 2008ರಲ್ಲಿ ಸ್ವೀಟಿಗೆ ವಿವಾಹವಾಗಿತ್ತು. ಪ್ರಕರಣದಲ್ಲಿ ಕುಮಾರ್ನ ಹಿರಿಯ ಸಹೋದರ ಹಾಗೂ ಆತನ ಮಡದಿಯನ್ನು ಬಂಧಿಸಲಾಗಿತ್ತು.
ತನಿಖೆಯನ್ನು ಸರಿಯಾಗಿ ಮಾಡದೇ ಇರುವ ಕಾರಣ ಹಿಂದಿನ ತನಿಖಾಧಿಕಾರಿ ಶಿವನಾಥ್ ರಾಮ್ ವಿರುದ್ಧ ಆಂತರಿಕ ತನಿಖೆಗೆ ಆದೇಶಿಸಲಾಗಿದೆ.