ಬಿಹಾರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಅಭ್ಯರ್ಥಿಗಳ ಆಸ್ತಿ ಘೋಷಣೆಯ ವಿಚಾರಗಳು ಬಹಳಷ್ಟು ಕುತೂಹಲ ಕೆರಳಿಸಿವೆ. ಅತ್ಯಂತ ಸಿರಿವಂತ ಅಭ್ಯರ್ಥಿಯಾಗಿರುವ ಆರ್‌ಜೆಡಿಯ ಅನಂತ್ ಕುಮಾರ್ ಸಿಂಗ್ ಕಳೆದ ಐದು ವರ್ಷಗಳ ಅವಧಿಯಲ್ಲಿ ತಮ್ಮ ಆಸ್ತಿಯು 144% ವರ್ಧನೆಯಾಗುವುದನ್ನು ಕಂಡಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಮೂರನೇ ಅತ್ಯಂತ ಸಿರಿವಂತ ಅಭ್ಯರ್ಥಿಯಾಗಿದ್ದ ಸಿಂಗ್, ಈ ವರ್ಷ ತಮ್ಮ ಆಸ್ತಿಯ ಒಟ್ಟಾರೆ ಮೌಲ್ಯವು 68 ಕೋಟಿ ರೂ.ಗಳಷ್ಟಕ್ಕೆ ಏರಿಕೆ ಕಂಡಿದೆ. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಸಿಂಗ್, ಮೊಕಾಮಾ ಕ್ಷೇತ್ರದಿಂದ ಜೈಲಿನಲ್ಲಿ ಇದ್ದುಕೊಂಡೇ ಗೆದ್ದು ಬಂದಿದ್ದರು. ಈತನ ವಿರುದ್ಧ ಅತ್ಯಂತ ಹೆಚ್ಚಿನ ಸಂಖ್ಯೆಯ ಕ್ರಿಮಿನಲ್ ಪ್ರಕರಣಗಳು ಇವೆ.
ಇದೇ ವೇಳೆ, ಕಾಂಗ್ರೆಸ್ಸಿನ ಗಜಾನಂದ್ ಶಾಹಿ ಒಟ್ಟಾರೆ 61 ಕೋಟಿ ರೂ.ಗಳ ಆಸ್ತಿಯನ್ನು ತೋರಿಸಿಕೊಂಡಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಜೆಡಿಯುನ ಮನೋರಮಾ ದೇವಿ ತಮ್ಮ ಬಳಿ 50 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಹೇಳಿಕೊಂಡಿದ್ದಾರೆ.