ವಿಪರೀತ ಕಾರ್ಯದೊತ್ತಡದ ಕಾರಣ ಮಾನಸಿಕವಾಗಿ ಜರ್ಝರಿತನಾಗಿದ್ದ ಬಿಹಾರ ಹೋಂ ಗಾರ್ಡ್ಸ್ ಒಬ್ಬರು ಮನಸೋಯಿಚ್ಛೆ ಗುಂಡು ಹಾರಿಸಿದ ಕಾರಣ ನಕ್ಸಲ್ ದಾಳಿ ನಡೆಯುತ್ತಿದೆ ಎನಿಸುವಂಥ ಸನ್ನಿವೇಶ ಸೃಷ್ಟಿಯಾಗಿತ್ತು.
ಬಿಹಾರದ ಮುಂಗೇರ್‌ನ ಬಾರಿಯಾಪುರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನಡೆದ ಈ ಘಟನೆಯಲ್ಲಿ 52 ವರ್ಷದ ಹೋಂ ಗಾರ್ಡ್ ಸಿಬ್ಬಂದಿಯೊಬ್ಬರು ಮಧ್ಯರಾತ್ರಿಯ ಬಳಿಕ ಮನಬಂದಂತೆ ಫೈರಿಂಗ್ ಮಾಡಿದ್ದಾರೆ.
“ದಟ್ಟ ಕತ್ತಲೆಯಲ್ಲಿ ಶಂಕಿತ ನಕ್ಸಲ್ ದಾಳಿಯೊಂದು ನಡೆಯುತ್ತಿದೆ ಎಂದು ನಮಗೆ ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದೆವು. ನಕ್ಸಲರ ಕಾಟ ಹೆಚ್ಚಿರುವ, ದಟ್ಟ ಅರಣ್ಯದಲ್ಲಿರುವ ಈ ಪ್ರದೇಶಕ್ಕೆ ಭಾರೀ ಪಡೆಯೊಂದಿಗೆ ದೌಡಾಯಿಸಿದೆವು”
“ನಮ್ಮ ಕಡೆಯಿಂದ ಪ್ರತೀಕಾರದ ಫೈರಿಂಗ್ ಆರಂಭವಾಯಿತು. ನೋಡ ನೋಡುತ್ತಲೇ, ಅದು ಮೊಹಮ್ಮದ್ ಜಾಹಿದ್ ಎಂಬ ಹೋಂ ಗಾರ್ಡ್ ಸಿಬ್ಬಂದಿ ಫೈರಿಂಗ್ ಮಾಡುತ್ತಿರುವುದು ಎಂದು ನಮಗೆ ತಿಳಿಯಿತು. ಆತ ಕೆಲ ದಿನಗಳಿಂದ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದ ಎಂದು ಹತ್ತಿರದಿಂದ ಬಲ್ಲ ಮಂದಿ ತಿಳಿಸಿದ್ದಾರೆ” ಎಂದು ಮುಂಗೇರ್‌ನ ಎಸ್‌ಪಿ ಮನವೇಂದ್ರ ಸಿಂಗ್ ಧಿಲ್ಲಾನ್ ತಿಳಿಸಿದ್ದಾರೆ.
ಶೌಚಾಲಯವೊಂದರ ಮೇಲ್ಛಾವಣಿ ಮೇಲೆ ಜಾಹಿದ್‌ನ ಗುಂಡು ಹೊಕ್ಕ ದೇಹ ಸಿಕ್ಕ ಬಳಿಕ ಕಾರ್ಯಾಚರಣೆ ಮುಗಿದಿದ್ದು, ಆತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆಗಳು ಮುಂದುವರೆಯಲಿವೆ.