ಎರಡನೇ ಹಂತದ ಕೊರೊನಾ ಲಸಿಕೆ ಅಭಿಯಾನ ಇಂದಿನಿಂದ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಈ ಸಂದರ್ಭದಲ್ಲಿ ಲಸಿಕೆ ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ಬಳಿಕ ದೇಶದ ಜನತೆ ಈ ಲಸಿಕೆಯನ್ನು ಪಡೆಯುವ ಮೂಲಕ ಕೊರೊನಾದಿಂದ ರಕ್ಷಣೆ ಪಡೆಯಿರಿ ಎಂದು ಕರೆ ನೀಡಿದ್ದರು.
ಇಂದು ಪ್ರಧಾನಿ ನರೇಂದ್ರ ಮೋದಿಯವರಲ್ಲದೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡಾ ಕೊರೊನಾ ಲಸಿಕೆ ಪಡೆದುಕೊಂಡಿದ್ದು, ʼನನ್ನ ಮೊದಲ ಡೋಸ್ ಕೊರೊನಾ ಲಸಿಕೆ ಪಡೆದ ವಿಚಾರವನ್ನ ಹಂಚಿಕೊಳ್ಳೋದಕ್ಕೆ ಖುಷಿಯಾಗುತ್ತಿದೆ. ಲಸಿಕೆಯನ್ನ ಜನರಿಗೆ ತಲುಪಿಸುತ್ತಿರುವ ನಮ್ಮ ದೇಶದ ವಿಜ್ಞಾನಿಗಳು, ಆರೋಗ್ಯ ಸಿಬ್ಬಂದಿಯ ಕಾರ್ಯಕ್ಕೆ ಆಭಾರಿಯಾಗಿದ್ದೇನೆʼ ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.
ನವೀನ್ ಪಟ್ನಾಯಕ್ ಲಸಿಕೆ ಪಡೆದ ಬೆನ್ನಲ್ಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಕೊರೊನಾ ಲಸಿಕೆ ಪಡೆದುಕೊಂಡಿದ್ದು, ಈ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಬಿಹಾರದ ಸಮಸ್ತ ಜನತೆಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ನಿತೀಶ್ ಕುಮಾರ್ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಸಹಯೋಗದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಸಹ ಕೊರೊನಾ ಲಸಿಕೆ ಉಚಿತವಾಗಿ ಲಭ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.