ಪಾಟ್ನಾ: ಬಿಹಾರ ವಿಧಾನಸಭೆಗೆ ಚುನಾವಣೆ ನಡೆದಿದೆ. ಮೊದಲ ಸುತ್ತಿನಲ್ಲಿ ಸ್ಪರ್ಧಿಸಿದ 1064 ಅಭ್ಯರ್ಥಿಗಳಲ್ಲಿ ಶೇ.30 ಕ್ಕೂ ಹೆಚ್ಚು ಜನ ತಮ್ಮ ಮೇಲೆ ಕ್ರಿಮಿನಲ್ ಪ್ರಕರಣ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್)ನ ಪೋಲ್ ರಿಜಿಸ್ಟರ್ ಗ್ರೂಪ್ ಅಭ್ಯರ್ಥಿಗಳು ನಾಮಪತ್ರದೊಟ್ಟಿಗೆ ಸಲ್ಲಿಸಿದ ಅಫಿಡವಿಟ್ ಆಧರಿಸಿ ಈ ಸಂಬಂಧ ವರದಿಯೊಂದನ್ನು ಸಿದ್ಧಪಡಿಸಿದೆ.
ಒಟ್ಟು ಅಭ್ಯರ್ಥಿಗಳ ಪೈಕಿ ಶೇ.31 ರಷ್ಟು ಅಥವಾ 328 ಜನ ತಮ್ಮ ಮೇಲೆ ಕ್ರಿಮಿನಲ್ ಆರೋಪ ಇರುವ ಬಗ್ಗೆ ತಿಳಿಸಿದ್ದಾರೆ. ಅದರಲ್ಲಿ ಶೇ. 23 ರಷ್ಟು ಅಥವಾ 244 ಅಭ್ಯರ್ಥಿಗಳು ತಮ್ಮ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣ ಇರುವ ಬಗ್ಗೆ ಘೋಷಣೆ ನೀಡಿದ್ದಾರೆ. 375 ಅಭ್ಯರ್ಥಿಗಳ ಆಸ್ತಿ ಕೋಟಿ ಮಿಕ್ಕಿದೆ. ಐವರು ಯಾವುದೇ ಆಸ್ತಿಯನ್ನೇ ಹೊಂದಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ.
ಬಿಹಾರದ ಪ್ರಮುಖ ರಾಜಕೀಯ ಪಕ್ಷ ಆರ್.ಜೆ.ಡಿ.ಯಿಂದ ಸ್ಪರ್ಧಿಸಿದ 41 ಅಭ್ಯರ್ಥಿಗಳ ಪೈಕಿ 30 ಜನ(ಶೇ.73 ರಷ್ಟು) ಕ್ರಿಮಿನಲ್ ಹಿನ್ನೆಲೆಯವರು. ಬಿ.ಜೆ.ಪಿ.ಯ ಶೇ. 72 ರಷ್ಟು, ಎಲ್.ಜೆ.ಪಿ.ಯ ಶೇ. 49, ಕಾಂಗ್ರೆಸ್ ನ ಶೇ.43, ಜೆ.ಡಿ.ಯು.ನ ಶೇ.,31 ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದವರಾಗಿದ್ದಾರೆ ಎಂದು ವರದಿ ಹೇಳಿದೆ.