ಹಿಂದಿ ಆವೃತ್ತಿಯ ಬಿಗ್ ಬಾಸ್ ಸೀಸನ್ 10ನ ವಿವಾದಿತ ಸ್ಪರ್ಧಿ ಸ್ವಾಮಿ ಓಂ(63) ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಸ್ವಾಮಿ ಓಂ ಬುಧವಾರ ಕೊನೆಯುಸಿರೆಳೆದಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಸ್ವಾಮಿ ಓಂ ಸ್ನೇಹಿತ ಮುಖೇಶ್ ಜೈನ್ ಪುತ್ರ ಅರ್ಜುನ್ ಜೈನ್, ಕಳೆದ ಕೆಲ ದಿನಗಳ ಹಿಂದೆ ಸ್ವಾಮಿ ಓಂ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಇದಾದ ಬಳಿಕ ಅವರ ಆರೋಗ್ಯ ತುಂಬಾನೇ ಕ್ಷೀಣಿಸಿತ್ತು. ಸಾಯಿ ಓಂ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.
ಸ್ವಾಮಿ ಓಂ ಕಳೆದ ಕೆಲ ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೊರೊನಾ ವೈರಸ್ನಿಂದ ಗುಣಮುಖರಾದ ಬಳಿಕವೂ ಅವರ ಆರೋಗ್ಯ ಸುಧಾರಿಸಿರಲಿಲ್ಲ. ನಿಶಕ್ತತೆಯಿಂದಾಗಿ ಅವರಿಗೆ ಸರಿಯಾಗಿ ನಡೆಯಲೂ ಆಗುತ್ತಿರಲಿಲ್ಲ. ಇದಾದ ಬಳಿಕ ಅವರ ಅರ್ಧ ದೇಹ ಪಾರ್ಶ್ವವಾಯುವಿಗೆ ತುತ್ತಾಗಿದೆ.
ಪಾರ್ಶ್ವವಾಯುವಿನಿಂದಾಗಿ ಕಳೆದ 15 ದಿನಗಳಿಂದ ಸ್ವಾಮಿ ಓಂ ಆರೋಗ್ಯ ತುಂಬಾನೇ ಕ್ಷೀಣಿಸಿತ್ತು. ಇಂದು ಬೆಳಗ್ಗೆ ಸ್ವಾಮಿ ಓಂ ಕೊನೆಯುಸಿರೆಳೆದಿದ್ದಾರೆ ಎಂದು ಅರ್ಜುನ್ ಜೈನ್ ಮಾಹಿತಿ ನೀಡಿದ್ದಾರೆ. ದೆಹಲಿ ನಿಗಮ್ ಬೋಧ್ ಘಾಟ್ನಲ್ಲಿ ಸ್ವಾಮಿ ಓಂ ಅಂತ್ಯಕ್ರಿಯೆ ನೆರವೇರಿದೆ ಎನ್ನಲಾಗಿದೆ.
ಬಿಗ್ ಬಾಸ್ ಹಿಂದಿ ಆವೃತ್ತಿಯ 10ನೇ ಸೀಸನ್ನಲ್ಲಿ ಸ್ಪರ್ಧಿಯಾಗಿ ಆಗಮಿಸಿದ ಬಳಿಕ ಸ್ವಾಮಿ ಓಂ ಸುದ್ದಿಯಾಗಿದ್ದರು. ರಿಯಾಲಿಟಿ ಶೋನ ಟಾಸ್ಕ್ ಒಂದರಲ್ಲಿ ಇತರೆ ಸ್ಪರ್ಧಿಗಳಾದ ಬನಿ ಜೆ ಹಾಗೂ ರೋಹನ್ ಮೆಹ್ರಾ ಮೇಲೆ ಮೂತ್ರ ವಿಸರ್ಜನೆ ಮಾಡಿ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ಈ ವಿವಾದದ ಬಳಿಕ ಬಿಗ್ ಬಾಸ್ ಶೋನಿಂದ ಸ್ವಾಮಿ ಓಂರನ್ನ ಹೊರ ಹಾಕಲಾಗಿತ್ತು.