ಅಕಸ್ಮಾತ್ ಆಗಿ ತಪ್ಪು ಲಿಂಕ್ ಮೇಲೆ ಕ್ಲಿಕ್ ಮಾಡಿದ ಕಾರಣಕ್ಕೆ ಪ್ರತಿಷ್ಠಿತ ಐಐಟಿ-ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸೀಟು ಕೈತಪ್ಪಿ ಹೋಗಲಿದ್ದ 18 ವರ್ಷದ ವಿದ್ಯಾರ್ಥಿಯ ನೆರವಿಗೆ ಸುಪ್ರೀಂ ಕೋರ್ಟ್ ಬಂದಿದೆ.
ಅರಿಯದೇ ಆದ ಪ್ರಮಾದದ ಕಾರಣದಿಂದ ಕಾಲೇಜಿನಲ್ಲಿ ಸೀಟು ನೀಡದೇ ಇರುವುದು ಬೇಡವೆಂದ ಸುಪ್ರೀಂ ಕೋರ್ಟ್, ಹುಡುಗನಿಗೆ ಇತರೆ ಎಲ್ಲಾ ವಿದ್ಯಾರ್ಥಿಗಳಂತೆ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಲು ಐಐಟಿಗೆ ಆದೇಶ ಕೊಟ್ಟಿದೆ.
ಆಗ್ರಾದ ಸಿದ್ಧಾಂತ್ ಬಾತ್ರಾ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜಿಇಇ) ಅಖಿಲ ಭಾರತ ಮಟ್ಟದಲ್ಲಿ 270ನೇ ರ‍್ಯಾಂಕ್ ಗಳಿಸಿ, ಐಐಟಿಗೆ ಪ್ರವೇಶ ಪಡೆದಿದ್ದರು. ಆದರೆ ಬಾತ್ರಾ ಕೇಳುತ್ತಿದ್ದ ಕೋರ್ಸ್‌ನ ಸೀಟುಗಳೆಲ್ಲ ಭರ್ತಿಯಾಗಿದ್ದ ಕಾರಣ ಅವರಿಗೆ ಪ್ರವೇಶ ನೀಡಲು ಐಐಟಿ ನಿರಾಕರಿಸಿತ್ತು.
ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ ಹಾಗೂ ಹೃಷಿಕೇಶ್ ರಾಯ್ ನೇತೃತ್ವದ ಪೀಠವು, ಮೇಲ್ಕಂಡ ಕೋರ್ಸ್‌ನಲ್ಲಿ ಹೆಚ್ಚುವರಿ ಸೀಟು ಸೃಷ್ಟಿಸಿ ಹುಡುಗನಿಗೆ ಅವಕಾಶ ಕೊಡಲು ಆದೇಶ ಕೊಟ್ಟಿದೆ. ತನ್ನ ಹೆತ್ತವರನ್ನು ಕಳೆದುಕೊಂಡಿದ್ದ ಬಾತ್ರಾ, ಬಹಳ ಕಷ್ಟಪಟ್ಟು ಪರೀಕ್ಷೆ ಪಾಸಾಗಿದ್ದಾಗಿ ಹೇಳಿಕೊಂಡಿದ್ದರು.