ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ 6-8 ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಬೇಕು ಎಂದು ಐಸಿಎಂಆರ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಐಸಿಎಂಆರ್ ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ, ದೇಶದಲ್ಲಿ ಕಂಪ್ಲೀಟ್ ಲಾಕ್ ಡೌನ್ ಜಾರಿಯ ಅಗತ್ಯವಿದೆ ಎಂದು ಹೇಳಿದ್ದಾರೆ. ಕೊರೊನಾ ಚೈನ್ ಲಿಂಕ್ ಬ್ರೇಕ್ ಮಾಡಲು 6-8 ವಾರಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಬೇಕು. ಅಂದಾಗ ಮಾತ್ರ ಸೋಂಕಿತರ ಸಂಖ್ಯೆಯ ಜೊತೆಗೆ ಸಾವು-ನೋವಿನ ಪ್ರಮಾಣವನ್ನು ತಡೆಯಲು ಸಾಧ್ಯ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ಯುವಕರು ಹೆಚ್ಚು ಸೋಂಕಿಗೆ ಬಲಿಯಾಗುತ್ತಿದ್ದಾರೆ. 30 ವರ್ಷದ ಶೇ.32 ರಷ್ಟು ಯುವಕರಲ್ಲಿ ಕೊರೊನಾ ಪಾಸಿಟಿವ್ ಬರುತ್ತಿದ್ದು, ದೇಶದಲ್ಲಿ ಯುವಜನತೆ ಸೋಂಕಿಗೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಪಾಯ ಕಟ್ಟಿಟ್ಟಬುತ್ತಿ. ಈ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿ ಅಗತ್ಯವಿದೆ ಎಂದು ಹೇಳಿದ್ದಾರೆ.
ಸೋಂಕಿತರ ಪ್ರಮಾಣ ಶೇ.10ಕ್ಕಿಂತ ಹೆಚ್ಚಿರುವ ನಗರ ಹಾಗೂ ಜಿಲ್ಲೆಗಳಲ್ಲಿ ಲಾಕ್ ಡೌನ್ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಲಾಕ್ ಡೌನ್ ಜಾರಿ ಮಾಡುವುದರಿಂದ ವ್ಯದ್ಯಕೀಯ ವ್ಯವಸ್ಥೆ ಮೇಲಿನ ಒತ್ತಡದ ಜೊತೆ ಸಾವಿನ ಪ್ರಮಾಣವನ್ನೂ ತಗ್ಗಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಐಸಿಎಂಆರ್ ನೀಡಿರುವ ಲಾಕ್ ಡೌನ್ ಸಲಹೆ ಕೇಂದ್ರ ಸರ್ಕಾರದ ಮುಂದಿದ್ದು, ಪ್ರಧಾನಿ ಮೋದಿ ದೇಶದಲ್ಲಿ 2 ತಿಂಗಳ ಕಂಪ್ಲೀಟ್ ಲಾಕ್ ಡೌನ್ ಘೋಷಣೆ ಮಾಡಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.